ಜೈಪುರ: ಕಳೆದ ವರ್ಷ ಡಿಸೆಂಬರ್ 6ರಂದು ರಾಜಸ್ಥಾನದಲ್ಲಿ “ಲವ್ ಜಿಹಾದ್’ ಆರೋಪದಡಿ, ಮೊಹಮ್ಮದ್ ಅಫ್ರಜುಲ್ ಎಂಬ ಕೂಲಿಕಾರ್ಮಿಕನೊಬ್ಬನನ್ನು ಕೊಂದು ಜೈಲುಪಾಲಾಗಿರುವ ಶಂಭುಲಾಲ್ ರೆಗರ್, ಭಾನುವಾರ ಜೈಲಿನಿಂದಲೇ ತಾನೇ ಚಿತ್ರಿಸಿರುವ ಸೆಲ್ಫಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.
ಇದರಲ್ಲಿ ಮಾತನಾಡಿರುವ ಆತ, ಅಫ್ರಜುಲ್ ನನ್ನು ಕೊಂದಿದ್ದಕ್ಕೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದಿದ್ದಾನೆ. ಆದರೆ, ಜೈಲಿನಲ್ಲಿ ತನಗೆ ಇತ್ತೀಚೆಗೆ ಪರಿಚಿತನಾಗಿರುವ ವ್ಯಕ್ತಿಯೊಬ್ಬ ತನ್ನ ಹತ್ಯೆಗೆ ಸಂಚು ಹೂಡಿರ ಬಹು ದೆಂಬ ಗುಮಾನಿ ಯನ್ನೂ ವ್ಯಕ್ತಪಡಿಸಿದ್ದಾನೆ.
ತನ್ನ ಇತ್ತೀಚೆಗಿನ ವಿಡಿಯೋದಲ್ಲಿ, ನನಗೆ ಈ ಜೈಲಿನಲ್ಲಿ ಬಿಗಿಭದ್ರತೆಯಿರುವ ಕೊಠಡಿ ನೀಡಿದ್ದಾರೆ. ಇಂಥ ಬಿಗಿಭದ್ರತೆಯ ನಡುವೆ ಯೂ, ಇದೇ ಜೈಲಿನಲ್ಲಿರುವ ಪಶ್ಚಿಮ ಬಂಗಾಳ ಮೂಲದ ವಾಸುದೇವ ಬ್ರಾಹ್ಮಣ್ ಎಂಬ ಕೈದಿ, ನನ್ನ ಬಳಿ ಬಂದು ಅನವಶ್ಯಕ ಸಲುಗೆ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.
ಇತ್ತೀಚೆಗೆ, ಶೌಚಕ್ಕೆ ತೆರಳಿದ್ದ ವೇಳೆ ಆತ ಇಸ್ಲಾಂ ಧರ್ಮೀಯ ಎಂಬುದು ನನ್ನ ಗಮನಕ್ಕೆ ಬಂದಿದೆ. ಎಂಥ ಬಿಗಿಭದ್ರತೆಯ ನಡುವೆ ಇರುವ ಕೈದಿಗಳನ್ನೂ ಹೋಗಿ ಮಾತನಾಡಿಸುವ ಛಾತಿ ಜಿಹಾದಿಗಳ ಶಕ್ತಿಯನ್ನು ತೋರಿಸುತ್ತದೆ. ಹಾಗಾಗಿ, ಆತನ ಸಲುಗೆಯ ಬಗ್ಗೆ ನಂಬಿಕೆ
ಬರುತ್ತಿಲ್ಲ” ಎಂದಿದ್ದಾನೆ.
ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಜೈಲಿನ ಅಧಿಕಾರಿಗಳು, “ವಾಸುದೇವ ಪಶ್ಚಿಮ ಬಂಗಾಳದ ಬ್ರಾಹ್ಮಣನೇ ಹೊರತು ಮುಸ್ಲಿಮನಲ್ಲ. ಆತ ಮಾದಕ ದ್ರವ್ಯ ಕೇಸಿನಲ್ಲಿ ಜೈಲು ಸೇರಿದ್ದಾನೆ. ಶಂಭುಲಾಲ್‌ನ ಆರೋಪದಲ್ಲಿ ಹುರುಳಿಲ್ಲ’ ಎಂದಿದ್ದಾರೆ. ಜತೆಗೆ, ಅವನ ಕೈಗೆ ಮೊಬೈಲ್ ಫೋನ್ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸುವುದಾಗಿಯೂ ತಿಳಿಸಿದ್ದಾರೆ.