Advertisement

ನಿರಾತಂಕವಾಗಿ ನಡೆದ ಸಮೀಕ್ಷೆ; ಇಂದು ಜ್ಞಾನವಾಪಿ 2ನೇ ಸುತ್ತಿನ ಸರ್ವೇ

02:06 AM May 15, 2022 | Team Udayavani |

ವಾರಾಣಸಿ: ಭಾರೀ ವಿವಾದಕ್ಕೆ ಕಾರಣ ವಾಗಿರುವ ಉತ್ತರಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೋಗ್ರಫಿ ಸಮೀಕ್ಷೆಯು ಶನಿವಾರ ಬಿಗಿಭದ್ರತೆಯೊಂದಿಗೆ ನಿರಾತಂಕವಾಗಿ ನೆರವೇರಿದೆ.

Advertisement

ಬೆಳಗ್ಗೆ 8 ಗಂಟೆಗೆ ಆರಂಭವಾದ ಸರ್ವೇ ಮಧ್ಯಾಹ್ನ 12ರವರೆಗೆ ಅಂದರೆ ಒಟ್ಟು 4 ಗಂಟೆಗಳ ಕಾಲ ನಡೆದಿದೆ. ಒಟ್ಟು ಶೇ. 40ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.

ರವಿವಾರ ಮತ್ತೆ ಸಮೀಕ್ಷೆ ಕಾರ್ಯ ಮುಂದು ವರಿಯಲಿದೆ. ಮಂಗಳವಾರದೊಳಗೆ ವರದಿ ನೀಡುವಂತೆ ವಾರಾಣಸಿಯ ನ್ಯಾಯಾಲಯ ಸೂಚಿಸಿರುವ ಕಾರಣ, ಅಷ್ಟರಲ್ಲಿ ಸರ್ವೇ ಕಾರ್ಯ ಪೂರ್ಣಗೊ ಳ್ಳುವ ಸಾಧ್ಯತೆಯಿದೆ. “ಇಡೀ ಪ್ರಕ್ರಿಯೆಯು ಶಾಂತಿಯುತ ವಾಗಿ ನೆರವೇರಿದೆ. ಯಾರಿಂದಲೂ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ. ಎಲ್ಲವೂ ಸಹಜವಾ ಗಿತ್ತು, ಎಲ್ಲರೂ ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ’ ಎಂದು ವಾರಾಣಸಿ ಪೊಲೀಸ್‌ ಆಯುಕ್ತ ಎ.ಸತೀಶ್‌ ಗಣೇಶ್‌ ಹೇಳಿದ್ದಾರೆ.

ಶುಕ್ರವಾರವಷ್ಟೇ ವಿವಾದಕ್ಕೆ ಸಂಬಂಧಪಟ್ಟ ಎಲ್ಲರನ್ನೂ ಕರೆದು ಸಭೆ ನಡೆಸಿ, ಆಯುಕ್ತರಿಗೆ ಸಮೀಕ್ಷೆ ಕೈಗೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಲಾಗಿತ್ತು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದರು. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗೆಂದು 1500ಕ್ಕೂ ಅಧಿಕ ಪೊಲೀಸರು ಮತ್ತು ಪಿಎಸಿ ಯೋಧರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

“ಯಥಾಸ್ಥಿತಿ ಬದಲಿಸುವುದು ಸರಿಯಲ್ಲ’: ಧಾರ್ಮಿಕ ಕಾರ್ಯಕ್ರಮ ನಡೆಯುವ ಯಾವುದೇ ಪ್ರಾರ್ಥನಾ ಸ್ಥಳಗಳ ಯಥಾಸ್ಥಿತಿ ಯನ್ನು ಬದಲಾಯಿಸುವುದು ಸರಿಯಲ್ಲ. ಅವುಗಳು ಹೇಗಿದೆಯೋ, ಎಲ್ಲಿದೆಯೋ ಹಾಗೆಯೇ ಅಲ್ಲೇ ಇರಲು ಬಿಡಬೇಕು. ಇಲ್ಲ ದಿ ದ್ದರೆ ಅದು ದೊಡ್ಡ ಮಟ್ಟದ ಸಂಘ ರ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಸಂಘರ್ಷಗಳನ್ನು ತಡೆಯಲೆಂದೇ ನರಸಿಂಹರಾವ್‌ ಸರಕಾರ “ಧಾರ್ಮಿಕ ಸ್ಥಳಗಳ ಕಾಯ್ದೆ’ಯನ್ನು ಜಾರಿ ಮಾಡಿದ್ದರು ಎಂದೂ ಅವರು ಸ್ಮರಿಸಿದ್ದಾರೆ.

Advertisement

ರಾಜಕೀಯ ಬೇಡ ಮೌರ್ಯ ಮನವಿ
ನ್ಯಾಯಾಲಯದ ಆಣತಿಯ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಶಾಂತಿಗೆ ಯಾವುದೇ ಕಾರಣಕ್ಕೂ ಭಂಗವಾಗದಂತೆ ಬಿಗಿ ಬಂದೋಬರ್ಸ್‌ ಏರ್ಪಡಿಸಲಾಗಿದೆ. ಮತ್ತೂಂದೆಡೆ, ಮಥುರಾ ವಿಚಾರದಲ್ಲೂ ಇದೇ ರೀತಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲಾಗುತ್ತಿದೆ. ಹಾಗಿದ್ದರೂ, ವಿಪಕ್ಷಗಳು ಮಾತ್ರ ಈ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯ ಬೆರೆಸುತ್ತಿವೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಕಟುವಾಗಿ ಟೀಕಿಸಿರುವ ಅವರು, “”ಜ್ಞಾನವಾಪಿ ವಿಚಾರದಲ್ಲಿ ಹಾಗೂ ಶ್ರೀ ಕೃಷ್ಣ ಜನ್ಮಭೂಮಿ ವಿಚಾರದಲ್ಲಿ ವಿಪಕ್ಷಗಳು ನಡೆಸುವ ಸಾಂಪ್ರದಾಯಿಕ ರಾಜಕಾರಣವನ್ನು ದಯವಿಟ್ಟು ನಿಲ್ಲಿಸಿ. ಇಂಥ ಧಾರ್ಮಿಕ ವಿವಾದಗಳು ಎಲ್ಲೇ ನಡೆಯಲಿ ಕೋರ್ಟ್‌ ಆದೇಶ ಬರುವವರೆಗೆ ಕಾಯಬೇಕು. ಹಾಗೊಮ್ಮೆ ಕೋರ್ಟ್‌ ಆದೇಶ ಬಂದಾಗ ಅದನ್ನು ಎಲ್ಲರೂ ಪಾಲಿಸಬೇಕು” ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next