Advertisement
ಮಂಗಳವಾರ ಮಧ್ಯಾಹ್ನ ಲೂಧಿಯಾನಾದ ಚೌಡಾ ಬಜಾರ್‌ನ ಬಂದಿಯಾ ಮೊಹಲ್ಲಾ ಪ್ರದೇಶದಲ್ಲಿ ಶಿಥಿಲಗೊಂಡಿದ್ದ ಹಳೆಯ ಕಟ್ಟಡ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ತಾಯಿ ಹಾಗೂ ಎರಡು ವರ್ಷದ ಮಗುವನ್ನು ಹಿಡಿದು ಓಡಿದ ಪರಿಣಾಮ ಸಣ್ಣ ಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಎದೆ ಝಲ್ ಎನಿಸುವಂತಿದೆ.
ನೂರು ವರ್ಷ ಹಳೆಯ ಕಟ್ಟಡದ ಕೆಳಭಾಗದಲ್ಲೇ ದಿನಕ್ಕೆ ನೂರಾರು ಜನ ತಿರುಗಾಡುತ್ತಿರುತ್ತಾರೆ ಅಲ್ಲದೆ ಕಟ್ಟಡದ ಅಕ್ಕ ಪಕ್ಕದಲ್ಲಿ ಹಲವು ಮನೆಗಳೂ ಇದ್ದು ನೆರೆಹೊರೆಯವರು ಕಟ್ಟಡವನ್ನು ತೆರವುಗೊಳಿಸುವಂತೆ ಹಲವು ಬಾರಿ ಕಟ್ಟಡ ಮಾಲೀಕರಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಕಟ್ಟಡ ಬಿದ್ದಿದ್ದರಿಂದ ಹೆಚ್ಚಿನ ಜನ ಸಂಚಾರ ಇರದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ, ಘಟನೆಯಲ್ಲಿ ಪಕ್ಕದ ಮನೆಯ ಮಹಿಳೆ ಮತ್ತು ಆಕೆಯ ಎರಡು ವರ್ಷದ ಮಗುವನ್ನು ಎತ್ತಿಕೊಂಡು ಓಡಿ ಬಂದ ಪರಿಣಾಮ ಇಬ್ಬರ ಜೀವ ಉಳಿದಿದೆ. ಮಾಹಿತಿ ತಿಳಿದ ತಕ್ಷಣ ರಕ್ಷಣಾ ತಂಡದ ಜೊತೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಅಲ್ಲದೆ ಕಟ್ಟಡದ ಅವಶೇಷಗಳಡಿ ಹಲವು ದ್ವಿಚಕ್ರ ವಾಹನಗಳು ಸಿಲುಕಿ ಅಪಾರ ಹಾನಿ ಸಂಭವಿಸಿದೆ.
Related Articles
ಕಟ್ಟಡ ಕುಸಿದ ಪರಿಣಾಮ ಅಕ್ಕಪಕ್ಕದಲ್ಲಿರುವ ಕೆಲ ಮನೆಗಳಿಗೂ ಹಾನಿಯಾಗಿದ್ದು ಮನೆಯ ಗೋಡೆಗಳು ಕುಸಿದು ಬಿದ್ದಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Advertisement
ಸೋಮವಾರವೇ ಕಟ್ಟಡ ಕೆಲ ಭಾಗ ಕುಸಿದಿತ್ತು: ಸೋಮವಾರವೇ ಕಟ್ಟಡದ ಗೋಡೆಯ ಭಾಗಗಳು ಕೆಳಗೆ ಬೀಳುತ್ತಿತ್ತು ಎಂದು ಸ್ಥಳೀಯ ನಿವಾಸಿ ಹೇಳಿಕೊಂಡಿದ್ದಾರೆ ಅಲ್ಲದೆ ಈ ಕುರಿತು ಕಟ್ಟಡದ ಮಾಲೀಕರಿಗೂ ಮಾಹಿತಿ ನೀಡಲಾಗಿತ್ತು. ಆದರೆ ಮಾಲೀಕ ಜಾಗಕ್ಕೆ ಬಾರದೆ ನಿರ್ಲಕ್ಷ ವಹಿಸಿದ್ದು ಇದರಿಂದ ಮಂಗಳವಾರ ಇಡೀ ಕಟ್ಟಡ ಕುಸಿದು ಬಿದ್ದಿದೆ ಎಂದು ಹೇಳಿದ್ದಾರೆ. ಘಟನೆಯಿಂದ ಮಹಿಳೆಯ ತಲೆಗೆ ಇಟ್ಟಿಗೆ ಬಿದ್ದು ಗಾಯಗಳಾಗಿದ್ದು, ಹಾಗೆಯೆ ಮಗುವಿಗೂ ಗಾಯಗಳಾಗಿದ್ದು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ:
ಇನ್ನು ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಪೊಲೀಸರು ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಆ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.