ವಿಜಯಪುರ: ಠಾಣೆಗೆ ಸಿಸಿ ಕ್ಯಾಮೆರಾ ಹಾಗೂ ಇತರೆ ವಸ್ತುಗಳ ಖರೀದಿ ಮಾಡಲೆಂದು ಹೇಳಿಕೊಂಡು ಪೇದೆಯೊಬ್ಬ ಹಳ್ಳಿಗಳಲ್ಲಿ ಬೈಕ್, ಟಂಟಂ ವಾಹನ ಮಾಲೀಕರಿಂದ ಹಣ ವಸೂಲಿ ಮಡುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಎಚ್.ಎಸ್.ಹೊಸಮನಿ ತಮ್ಮ ಠಾಣಾ ವ್ಯಾಪ್ತಿಯ ಮಣ್ಣೂರು ಗ್ರಾಮದಲ್ಲಿ ಬೈಕ್, ಟಂಟಂ, ಆಟೋಗಳಿಗೆ ದಂಡ ಹಾಕದಿರಲು ಪ್ರತಿ ಬೈಕ್ ಮಾಲೀಕರಿಂದ ತಲಾ 500 ರೂ. ಹಣ ವಸೂಲಿ ಮಾಡುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದಿರುವ ಗ್ರಾಮಸ್ತರು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಹೊಸಮನಿ ಪೊಲೀಸ್ ಠಾಣೆಗೆ ಸಿ.ಸಿ. ಕೆಮೆರಾ ಉಪಕರಣ ಖರೀದಿಗಾಗಿ ಠಾಣೆಯ ಪಿಎಸ್ಐ ಸೂಚನೆ ಮೇರೆಗೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿರುವುದಾಗಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಹೆಡ್ ಕಾನ್ಸ್ಟೇಬಲ್ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಆರೋಪಿ ಎಚ್.ಎಸ್. ಹೊಸಮನಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.