ತೈಪೆ: ತೈವಾನ್‌ನ ಆಗ್ನೇಯ ಭಾಗದಲ್ಲಿ ಭಾನುವಾರ ಭಾರೀ ಪ್ರಮಾಣದ ಭೂಕಂಪ ಸಂಭವಿಸಿದೆ. ರಿಕ್ಟರ್‌ಮಾಪಕದಲ್ಲಿ ಅದರ ಪ್ರಮಾಣ 6.8 ಎಂದು ದಾಖಲಾಗಿದೆ.
ಕಂಪನದ ರಭಸಕ್ಕೆ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದ್ದ ರೈಲುಗಳು ಆಟಿಕೆಗಳಂತೆ ಓಲಾಡಿವೆ ಮತ್ತು ಕೆಲವು ಸ್ಥಳಗಳಲ್ಲಿ ಅವುಗಳು ಹಳಿ ತಪ್ಪಿವೆ. ರೈಲುಗಳು ಓಲಾಡುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭೂಕಂಪನದಿಂದ ಸದ್ಯಕ್ಕೆ ಒಬ್ಬ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಶನಿವಾರದಿಂದ ಈಚೆಗೆ ಚಿಶಾಂಗ್, ಯುಲಿ ಮತ್ತು ಇತರ ಸ್ಥಳಗಳಲ್ಲಿ ಭೂಕಂಪ ಸಂಭವಿಸುತ್ತಿದೆ. ಭಾನುವಾರ ನಡೆದದ್ದು ಪ್ರಬಲವಾದದ್ದು ಎಂದು ವಿಶ್ಲೇಷಿಸಲಾಗುತ್ತಿದೆ.
ಯುಲಿ ಎಂಬ ನಗರದಲ್ಲಿ 7 ಸಾವಿರಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಂಡಿದೆ. ಆ ನಗರದಲ್ಲಿ ಇರುವ ಚರ್ಚ್‌ನ ಗೋಡೆ ಮತ್ತು ನೆಲ ಕಂಪನದ ತೀವ್ರತೆಗೆ ಸೀಳು ಬಿಟ್ಟಿವೆ. ಇದಲ್ಲದೆ, ಯುಲಿ ಸಮೀಪದಲ್ಲಿ ಇರುವ ರೆಸಾರ್ಟ್‌ನಲ್ಲಿ 400 ಮಂದಿ ಪ್ರವಾಸಿಗರು ಅತಂತ್ರರಾಗಿದ್ದು, ಅವರನ್ನು ಪಾರು ಮಾಡುವ ಯತ್ನ ನಡೆದಿದೆ. ಅಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜತೆಗೆ ಮೊಬೈಲ್ ಸಂಪರ್ಕವೂ ಕಡಿತಗೊಂಡಿದೆ.
ತೈವಾನ್‌ಗೆ ಹೊಂದಿಕೊಂಡು ಇರುವ ದಕ್ಷಿಣ ಜಪಾನ್‌ನ ಕೆಲವು ಜಿಲ್ಲೆಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು. ಹೀಗಾಗಿ, ಅಲ್ಲಿ ಕೆಲಕಾಲ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿತ್ತು.