ಕೊಲಂಬೊ: ಕಾರು ರೇಸ್ ಸ್ಪರ್ಧೆಯ ಸಂದರ್ಭದಲ್ಲಿ ಕಾರೊಂದು ಟ್ರ್ಯಾಕ್ ನಿಂದ ತಪ್ಪಿ ಜನರ ಮೇಲೆ ಹರಿದ ಪರಿಣಾಮ 7 ಮಂದಿ ಮೃತಪಟ್ಟು, 20 ಮಂದಿ ಗಾಯಗೊಂಡಿರುವ ಘಟನೆ ಶ್ರೀಲಂಕಾದಲ್ಲಿ ಭಾನುವಾರ(ಏ.21 ರಂದು) ನಡೆದಿದೆ.
ಶ್ರೀಲಂಕಾದ ರಾಜಧಾನಿ ಕೊಲಂಬೊದಿಂದ ಪೂರ್ವಕ್ಕೆ 180 ಕಿಲೋಮೀಟರ್ ದೂರದಲ್ಲಿರುವ ಚಹಾ ಬೆಳೆಯುವ ಕೇಂದ್ರ ಬೆಟ್ಟಗಳಲ್ಲಿರುವ ದಿಯಾತಲಾವಾ ಪಟ್ಟಣದಲ್ಲಿ ಕಾರು ರೇಸ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಈ ಸ್ಪರ್ಧೆಯನ್ನು ನೋಡಲು ಸಾವಿರಾರು ಪ್ರೇಕ್ಷಕರು ಸೇರಿದ್ದರು.
ಈ ಸಂದರ್ಭದಲ್ಲಿ ರೇಸ್ ನಲ್ಲಿ ಭಾಗಿಯಾಗಿದ್ದ ಕಾರೊಂದು ರೇಸ್ ಟ್ರ್ಯಾಕ್ ನಿಂದ ತಪ್ಪಿ ನೆರೆದಿದ್ದ ಜನರ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಅಧಿಕಾರಿಗಳು ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ20 ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡವರಲ್ಲಿ ಮೂವರ ಸ್ಥಿತಿ ಸ್ಥಿತಿ ಚಿಂತಾಜನಕವಾಗಿದೆ ಪೊಲೀಸ್ ವಕ್ತಾರ ನಿಹಾಲ್ ತಲ್ದುವಾ ಅವರು ತಿಳಿಸಿದ್ದಾರೆ.
ಶ್ರೀಲಂಕಾದ ಮಿಲಿಟರಿ ಅಕಾಡೆಮಿಯ ರೇಸ್ ಸರ್ಕ್ಯೂಟ್‌ನಲ್ಲಿ ಸುಮಾರು 45,000 ಪ್ರೇಕ್ಷಕರು ಜಮಾಯಿಸಿದ್ದರು. ಈವೆಂಟ್ ನ್ನು ಶ್ರೀಲಂಕಾ ಸೇನೆ ಮತ್ತು ಶ್ರೀಲಂಕಾ ಆಟೋಮೊಬೈಲ್ ಸ್ಪೋರ್ಟ್ಸ್ ಆಯೋಜಿಸಿತು.