ವಾಷಿಂಗ್ಟನ್ : ಸಿರಿಯಾದ ಇಡ್ಲಿಬ್ ಪ್ರಾಂತ್ಯದಲ್ಲಿ ಅಮೆರಿಕಾ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಹತನಾದ ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್ ಬಗ್ದಾದಿಯನ್ನು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸಮುದ್ರದಲ್ಲಿ ಸಮಾಧಿ ಮಾಡಲಾಗಿದೆ ಎಂದು ಅಮೇರಿಕಾ ಸೇನೆ ದೃಢಪಡಿಸಿದೆ. ಜೊತೆಗೆ ದಾಳಿಯ ಸಂದರ್ಭದಲ್ಲಿ ಚಿತ್ರಿಕರಿಸಿದ ಪೋಟೋ ಮತ್ತು ವಿಡಿಯೋವನ್ನು ಬಿಡುಗಡೆ ಮಾಡಿದೆ.
ಅಲ್ ಬಗ್ದಾದಿಯ ಉತ್ತರಾಧಿಕಾರಿ ಇನ್ನು ಕೆಲವೇ ವಾರಗಳಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಅಮೆರಿಕ ಸೇನೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸುಮಾರು 14 ಸಾವಿರ ಹೋರಾಟಗಾರರು ಇರಾಖ್ ಮತ್ತು ಸಿರಿಯಾದ ವಿವಿಧ ಪ್ರಾಂತ್ಯಗಳಲ್ಲಿ ಚದುರಿದ್ದಾರೆ ಎಂದು ಅಮೆರಿಕಾದ ಭಯೋತ್ಪಾದಕ ನಿಗ್ರಹ ಕೇಂದ್ರದ ನಿರ್ದೇಶಕ ರಸ್ ಟ್ರಾನ್ಸರ್ಸ್ ಹೇಳಿದ್ದಾರೆ.
ಅಮೆರಿಕಾ ಸೇನೆ ಬಿಡುಗಡೆ ಮಾಡಿದ ಚಿತ್ರವು ಕಪ್ಪು ಬಿಳುಪು ಬಣ್ಣವನ್ನು ಹೊಂದಿದ್ದು ವಾಯುವ್ಯ ಸಿರಿಯಾ ಭಾಗದಲ್ಲಿ ಎತ್ತರದ ಕಾಂಪೌಂಡ್ ನಡುವಿನ ಬಾಗ್ದಾದಿ ಅಡಗುತಾಣಕ್ಕೆ ಯುಎಸ್ ಪಡೆ ಕಾಲ್ನಡಿಗೆಯಲ್ಲಿ ಶಸ್ತ್ರಾಸ್ತ್ರಧಾರಿಯಾಗಿ ಬರುತ್ತಿರುವುದನ್ನು ವಿಡಿಯೋ ಮತ್ತು ಫೋಟೋದಲ್ಲಿ ಕಾಣಬಹುದಾಗಿದೆ.ಸಿರಿಯಾ ಇಡ್ಲಿಬ್ ಪ್ರಾಂತ್ಯದಲ್ಲಿರುವ ಬಾಗ್ದಾದಿ ಕಾಪೌಂಡ್ನ್ನು ಹೊಡೆದುರುಳಿಸಲು ಸೇನಾ ಪಡೆಯ ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆ ಗುಂಡಿನ ದಾಳಿ ನಡೆಸಿದ ಬಾಗ್ದಾದಿ ಬೆಂಬಲಿಗರ ವಿರುದ್ಧ ವೈಮಾನಿಕ ದಾಳಿ ನಡೆಸಿದ ದೃಶ್ಯ ವಿಡಿಯೋದಲ್ಲಿದೆ. ಇಡ್ಲಿಬ್ ಪ್ರಾಂತ್ಯದಲ್ಲಿ ಪ್ರತ್ಯೇಕವಾಗಿದ್ದ ಬೃಹದಾಕಾರದ ಕಾಪೌಂಡ್ನ ದಾಳಿಯ ಮೊದಲಿನ ಚಿತ್ರ ಹಾಗೂ ದಾಳಿಯ ನಂತರದ ಚಿತ್ರವನ್ನು ಬಿಡುಗಡೆಗೊಳಿಸಿದೆ.
ಯುಎಸ್ ವಿಶೇಷ ಪಡೆ ದಾಳಿ ಬಳಿಕ ಧ್ವಂಸಗೊಂಡ ಕಾಂಪೌಂಡ್ ನೋಡಲು ದೊಡ್ಡದಾದ ಗುಂಡಿಯೊಂದಿಗೆ ಪಾರ್ಕಿಂಗ್ ಸ್ಥಳದಂತೆ ಕಾಣುತ್ತಿತ್ತು ಎಂದು ಕಮ್ಯಾಂಡರ್ ಆಫ್ ಯುಎಸ್ ಸೆಂಟ್ರಲ್ ಕಮ್ಯಾಂಡ್ನ ಮರೀನ್ ಕಾರ್ಪ್ಸ್ ಜನರಲ್ ಕಿನ್ನೀತ್ ಮೆಕೆಂಜಿ ತಿಳಿಸಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲೇ ಹೇಳಿದಂತೆ ಬಾಗ್ದಾದಿ ಸುರಂಗ ಮಾರ್ಗದ ಮೂಲಕ ತಪ್ಪಿಕೊಳ್ಳಲು ಪ್ರಯತ್ನಿಸಿ ಸಾಧ್ಯವಾಗದೇ ತನ್ನನ್ನೇ ಸ್ಪೋಟಿಸಿಕೊಂಡ . ಆದರೆ, ಈ ವೇಳೆ ತನ್ನ ಮೂವರು ಮಕ್ಕಳೊಂದಿಗೆ ಆತ ಸಾಯಲಿಲ್ಲ. ಬದಲಾಗಿ ಇಬ್ಬರು ಮಕ್ಕಳು ಮಾತ್ರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮಕ್ಕಳಿಬ್ಬರು 12 ರೊಳಗಿನ ವಯೋಮಾನದವರು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕುಖ್ಯಾತ ಐಸಿಸ್ ಉಗ್ರ ಸಂಘಟನೆಯೆ ಸಂಸ್ಥಾಪಕ ಅಬುಬಕರ್ ಅಲ್ ಬಾಗ್ದಾದಿಯನ್ನು ರವಿವಾರ ಅಮೇರಿಕಾ ಸೇನೆಯು ಸರಿಯಾದಲ್ಲಿ ಆತನ ರಹಸ್ಯ ಅಡಗುತಾಣದಲ್ಲಿ ನುಗ್ಗಿ ಬಲಿ ಪಡೆದಿತ್ತು.