ನವದಹೆಲಿ: ಇಂಟರ್ ನೆಟ್ ನಲ್ಲಿ ದಿನಕ್ಕೆ ನೂರಾರು ವಿಡಿಯೋಗಳು ಓಡಾಡುತ್ತವೆ. ಕೆಲವೊಂದು ವಿಡಿಯೋಗಳು ವೈರಲ್ ಆಗುತ್ತವೆ. ದೃಷ್ಟಿಹೀನ ಹುಡುಗಿಯೊಬ್ಬಳು ಎಲೆಕ್ಟ್ರಾನಿಕ್ ಕೀಬೋರ್ಡ್ ನಲ್ಲಿ ನುಡಿಸಿದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮೆಚ್ಚಿಕೊಂಡಿದ್ದು, ಸಂಗೀತ ಮಾಂತ್ರಿಕ ಎ.ಆರ್ ರಹಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಹೊಗಳಿದ್ದಾರೆ.
ಸಹನಾ ಎನ್ನುವ ದೃಷ್ಟಿಹೀನ ಹುಡುಗಿಯೊಬ್ಬಳು ಎಲೆಕ್ಟ್ರಾನಿಕ್ ಕೀಬೋರ್ಡ್ ನುಡಿಸುವ ಕೌಶಲ್ಯದಿಂದ ಜನರ ಗಮನ ಸೆಳೆದಿದ್ದಾರೆ. ಅಕಾಡೆಮಿ ಪ್ರಶಸ್ತಿ ವಿಜೇತ ಸಂಗೀತಗಾರ ಎ.ಆರ್. ರಹಮಾನ್ ಸಂಯೋಜನೆ ಮಾಡಿರುವ ಕೋಬ್ರಾ ಚಿತ್ರದ ‘ತುಂಬಿ ತುಲ್ಲಾಲ್’ ಹಾಡನ್ನು ತಮ್ಮ ಎಲೆಕ್ಟ್ರಾನಿಕ್ ಕೀಬೋರ್ಡ್ ನಿಂದ ಮಧುರವಾಗಿ ನುಡಿಸಿದ್ದಾರೆ. ನೆಟ್ಟಿಗರು ಸಹನಾಳ ಪ್ರತಿಭೆ ನೋಡಿ ಫಿದಾ ಆಗಿದ್ದು ಕೀಬೋರ್ಡ್ ನುಡಿಸುವ ಕೌಶಲ್ಯವನ್ನು ಕೊಂಡಾಡಿದ್ದಾರೆ.
ಸ್ವತಃ ಸಂಗೀತ ಸಂಯೋಜಕ ಎ.ಆರ್.ರಹಮಾನ್ ಸಹನಾಳ ವಿಡಿಯೋ ನೋಡಿ ರಿಟ್ವೀಟ್ ಮಾಡಿದ್ದು “ ಸ್ವೀಟ್” ಎಂದು ಬರೆದು ಯುವ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.
ಸಹನಾಳ ಪಿಯಾನೋ ನುಡಿಸುವ ವಿಡಿಯೋ ಜೂನ್ 30 ರಂದು ಪೋಸ್ಟ್ ಮಾಡಲಾಗಿದ್ದು ಇದುವರೆಗೆ 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಯುವ ಪ್ರತಿಭೆಯನ್ನು ನೋಡಿ ಹಲವಾರು ನೆಟ್ಟಿಗರು ಬೆನ್ನು ತಟ್ಟಿದ್ದಾರೆ.