ನವದೆಹಲಿ: ಜೀವನ ನಡೆಸಲು ದುಡ್ಡು ಮುಖ್ಯ. ಅದರೊಂದಿಗೆ ದುಡಿಯುವುದು ಕೂಡ ಅಷ್ಟೇ ಮುಖ್ಯ. ಈ ಮಾತಿಗೆ ಸಾಕ್ಷಿಯಾಗಿದೆ ಈ ವೈರಲ್ ವಿಡಿಯೋ.
ಟ್ವಿಟರ್ ನಲ್ಲಿ ಮಹಿಳೆಯೊಬ್ಬರು ಫುಡ್ ಡೆಲಿವೆರಿ ಮಾಡುವ ವಿಡಿಯೋವೊಂದು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಇದು ಸಾಮಾನ್ಯ ಮಹಿಳೆಯ ವಿಡಿಯೋವಲ್ಲ. ಬದುಕಿನಲ್ಲಿ ಸೋತವರಿಗೆ ಸ್ಪೂರ್ತಿ ತುಂಬುವ ಮಹಿಳೆಯೊಬ್ಬರ ಛಲದ ವಿಡಿಯೋ.
ವಿಶೇಷ ಚೇತನ ಮಹಿಳೆಯೊಬ್ಬರು ವೀಲ್ ಚೇರ್ ನಲ್ಲಿ ಕೂತು ಫುಡ್ ಡೆಲಿವೆರಿ ಮಾಡಲು ಹೋಗುತ್ತಿರುವ ವಿಡಿಯೋವನ್ನು ದೆಹೆಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 6 ಸೆಕೆಂಡ್ ಗಳ ಈ ವಿಡಿಯೋವನ್ನು ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.
ಜೀವನ ಕಷ್ಟಕರವಾಗಿದೆ. ಆದರೆ ನಾವು ಸೋಲನ್ನು ಒಪ್ಪಿಕೊಳ್ಳಲು ಕಲಿತಿಲ್ಲ. ಇವರ ಜೀವನಕ್ಕೆ ಸೆಲ್ಯೂಟ್ ಎಂದು ಸ್ವಾತಿ ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದ್ದು, 12 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಮಹಿಳೆಯ ಬದುಕಿನ ಛಲಕ್ಕೆ ನೆಟ್ಟಿಗರು ಸಲಾಂ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.