ನವದೆಹಲಿ : ಇಂದಿನಿಂದ (ಏ.06) ತಮಿಳುನಾಡು ವಿಧಾನಸಭಾ ಚುನಾವಣೆಯ ಮತದಾನ ಶುರುವಾಗಿದೆ. ಮೊದಲ ಹಂತದ ಮತದಾನ ಶುರುವಾದ ಹಿನ್ನೆಲೆಯಲ್ಲೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಕತ್ತೆಗಳು ಇವಿಎಮ್ ಯಂತ್ರಗಳನ್ನು ಹೊತ್ತು ಸಾಗುತ್ತಿರುವ ವಿಡಿಯೋವನ್ನು ಕಳೆದ ಸೋಮವಾರ ನ್ಯೂಸ್ ಏಜೆನ್ಸಿ ಎಎನ್ಐ ಶೇರ್ ಮಾಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ನಡೆದಿರುವುದು ತಮಿಳುನಾಡಿನ ದಿಂಡಿಗುಲ್ ಜಿಲ್ಲೆಯ ನಥಮ್ ಪ್ರದೇಶದಲ್ಲಿ ಎನ್ನಲಾಗುತ್ತಿದೆ.
ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ ತಮಿಳುನಾಡಿನಲ್ಲಿ ಕತ್ತೆಯ ಮೇಲೆ ಇವಿಎಮ್ ಯಂತ್ರಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲಿಯವರೆಗೂ ಕೇಳಿಲ್ಲ. ಆದ್ರೆ ತಮಿಳುನಾಡಿನಲ್ಲಿ ಬಸ್, ವಾಹನ ಸಂಪರ್ಕ ಇಲ್ಲದ ಊರುಗಳೂ ಇವೆ ಎನ್ನುವ ಮಾಹಿತಿ ಇದೆ.
ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯೋಗವು ಧರ್ಮಪುರಿಯ ಕೊಟ್ಟೂರು ಗ್ರಾಮಕ್ಕೆ ಚುನಾವಣಾ ಸಾಮಗ್ರಿಗಳನ್ನು ಸಾಗಿಸಲು ನಾಲ್ಕು ಕತ್ತೆಗಳನ್ನು ನೀಡಿತ್ತು. ಇಷ್ಟೆ ಅಲ್ಲದೆ ಕಥಿತಿಮಲೈ ಎಂಬ ಪ್ರದೇಶದಲ್ಲಿ 140 ಮತದಾರರಿಗಾಗಿ ಕತ್ತೆಗಳನ್ನು ಬಳಸಲಾಗಿತ್ತು. 9 ಕಿ.ಮೀ ನಡೆದು ಬರುವ ಕಾರಣ ಈ ಪ್ರಾಣಿಗಳನ್ನು ಬಳಕೆ ಮಾಡಲಾಗಿತ್ತು ಎನ್ನಲಾಗಿದೆ.
ಇಂದು ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ, ಪುದುಚರಿಗಳಲ್ಲಿ ಮತದಾನ ನಡೆಯುತ್ತಿದೆ.