ದೆಹಲಿ: ದೆಹಲಿ ಮೆಟ್ರೋ ಮತ್ತೆ ಸುದ್ದಿಯಾಗಿದೆ. ಯುವ ಜೋಡಿಯೊಂದು ಆತ್ಮೀಯವಾಗಿ ಕೂತಿರುವ ವಿಡಿಯೋ ವೈರಲ್ ಆಗಿದೆ.
ಕಳೆದ ಕೆಲ ದಿನಗಳಿಂದ ದೆಹಲಿ ಮೆಟ್ರೋ ರೈಲು ಸುದ್ದಿಯಲ್ಲಿದೆ. ಇತ್ತೀಚೆಗೆ ಜೋಡಿಯೊಂದು ಕೋಚ್ ನಲ್ಲಿ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಇದಕ್ಕೂ ಮುನ್ನ ಬಿಕಿನಿ ಧರಿಸಿಕೊಂಡು ಯುವತಿಯೊಬ್ಬಳು ಮೆಟ್ರೋದಲ್ಲಿ ಸಂಚರಿಸಿದ್ದಳು.
ಈ ಎರಡೂ ವಿಚಾರಗಳಿಗೆ ಸಂಬಂಧಿಸಿ ದೆಹಲಿ ಮೆಟ್ರೋ ರೈಲು ನಿಗಮವು ತನ್ನ ಪ್ರಯಾಣಿಕರಿಗೆ “ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಿರಿ” ಎಂದು ಮನವಿ ಮಾಡಿತ್ತು.
ಇದೀಗ ಮೆಟ್ರೋದಲ್ಲಿನ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋದಲ್ಲಿ ಆಶ್ಲೀಲ ಅಥವಾ ಅಸಭ್ಯವಾಗಿರುವ ಯಾವ ಅಂಶಗಳು ಕೂಡ ಇಲ್ಲ. ಅಭಿನವ್ ಠಾಕೂರ್ ಎಂಬ ಟ್ವಿಟರ್ ಬಳಕೆದಾರ ಈ ವಿಡಿಯೋ ಹಂಚಿಕೊಂಡಿದ್ದು, “ನನಗೆ ತುಂಬಾ ಅಸಹ್ಯ ಅನಿಸುತ್ತಿದೆ. ದಯವಿಟ್ಟು ಸಹಾಯ ಮಾಡಿ” ಎಂಬ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
ವಿಡಿಯೋದಲ್ಲಿ ಯುವತಿ ಯುವಕನ ಹೆಗಲ ಮೇಲೆ ಮಲಗಿದ್ದಾಳೆ. ಯುವಕ ಯುವತಿ ಮೇಲೆ ಕೈ ಹಾಕಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ಅಸಹ್ಯವೆನ್ನಿಸುವಂತಹ ಯಾವುದೇ ವಿಚಾರಗಳಿಲ್ಲ ಎಂದು ವಿಡಿಯೋ ಹಂಚಿಕೊಂಡ ಅಭಿನವ್ ಠಾಕೂರ್ ವಿರುದ್ಧ ಗರಂ ಆಗಿದ್ದಾರೆ.
ಇಬ್ಬರು ಪ್ರೀತಿಯಿಂದ ಒಟ್ಟಿಗೆ ಕುಳಿತುಕೊಂಡಿದ್ದಾರೆ. ಇದೊಂದು ಸ್ನೇಹಮಯ ದೃಶ್ಯ, ಇದರಲ್ಲಿ ಅಸಹ್ಯವೆನಿಲ್ಲ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ನಿಮಗೆ ಅಸಹ್ಯ ಕಂಡರೆ ನಿಮ್ಮ ಕಣ್ಣು ಮುಚ್ಚಿಕೊಳ್ಳಿ ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಅನುಮತಿ ಇಲ್ಲದೆ ಇನ್ನೊಬ್ಬರ ವಿಡಿಯೋ ತೆಗೆಯೋದು ತಪ್ಪು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.