ಲೋನಾವಾಲಾ : ಮಾಹಾರಾಷ್ಟ್ರದ ಲೋನಾವಾಲಾದಿಂದ ಸುಮಾರು 11 ಕಿ.ಮೀ ದೂರದಲ್ಲಿರುವ ಮಾವಲ್ ತಾಲೂಕಿನ ಪಟಾನ್ ಗ್ರಾಮದ ಬಂಗಲೆಯಲ್ಲಿ ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸುತ್ತಿದ್ದ ದಂಧೆ ಭೇದಿಸಿರುವ ಪೊಲೀಸರು ಶುಕ್ರವಾರ ಹಲವರನ್ನು ಬಂಧಿಸಿದ್ದಾರೆ.
ಸುಳಿವಿನ ಮೇರೆಗೆ ಪೊಲೀಸರು ಸಂಜೆ 5 ಗಂಟೆ ಸುಮಾರಿಗೆ ಬಂಗಲೆಯ ಮೇಲೆ ದಾಳಿ ನಡೆಸಿದ್ದು 13 ಪುರುಷರು ಮತ್ತು ಐವರು ಮಹಿಳೆಯರು ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಿ ವಿವಿಧ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ದಾಳಿ ವೇಳೆ ಪೊಲೀಸರು ಆರೋಪಿಗಳಿಂದ ಅಶ್ಲೀಲ ಚಿತ್ರಗಳ ಚಿತ್ರೀಕರಣಕ್ಕೆ ಬಳಸಿದ 6.72 ಲಕ್ಷ ರೂ ಮೌಲ್ಯದ ಕೆಮರಾಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೋರ್ನ್ ಚಿತ್ರಗಳನ್ನು ನೋಡಲು ಆಸಕ್ತಿ ಹೊಂದಿರುವರಿಂದ ಚಂದಾ ಶುಲ್ಕ ಪಡೆದು ಆರೋಪಿಗಳು ಹಣ ಸಂಪಾದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಎಲ್ಲಾ 15 ಮಂದಿಯನ್ನು ಬಂಧಿಸಿ ಅವರ ವಿರುದ್ಧ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ವಿವಿಧ ಕಾಯ್ದೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಬಂಧಿತ ಆರೋಪಿಗಳು ಕೋಲ್ಕತಾದ ವಿಷ್ಣು ಮುನ್ನಾಸಾಬ್ (30), ಉತ್ತರ ಪ್ರದೇಶದ ಜಾವೇದ್ ಖಾನ್ (35) ಮತ್ತು ಸಮೀರ್ ಆಲಂ (26), ಚಂದ್ರಾಪುರದ ಬುದ್ಧಸೇನ್ ಶ್ರೀವಾಸ್ (29), ಮುಂಬೈನ ಅನುಪ್ ಚೌಬೆ (29), ರಾಹುಲ್ ನೆವ್ರೇಕರ್ (38), ಹರಿಯಾಣದ ರಾಮ್‌ಕುಮಾರ್ ಯಾದವ್ (21) ಮತ್ತು ಮನೀಶ್ ಚೌಧರಿ (20), ಗುಜರಾತ್‌ನ ಅನಿಕೇತ್ ಶರ್ಮ (19) ಮತ್ತು ಡೆಹ್ರಾಡೂನ್‌ನ ವಶನ್ ವರ್ಮ (21) ಎಂದು ಗುರುತಿಸಲಾಗಿದೆ.
ಅಶ್ಲೀಲ ಚಿತ್ರಗಳನ್ನು ಚಿತ್ರೀಕರಿಸಲು ಆರೋಪಿಗಳಿಗೆ ಬಂಗಲೆಯನ್ನು ಬಾಡಿಗೆಗೆ ನೀಡಿದ ಮೂವರು ಸ್ಥಳೀಯರಾದ ಸುಖ್‌ದೇವ್ ಜಾಧವ್ (52), ಏಕೇಶ್ ಶಿಂಧೆ (32) ಮತ್ತು ಸನ್ನಿ ಶೆಡ್ಜ್ (35), ವಿರುದ್ಧವೂ ಪ್ರಕರಣ ದಾಖಲಿಸಿ ಬಂಧನಕ್ಕೊಳಪಡಿಸಲಾಗಿದೆ.