ದೆಹಲಿ: ಚಲಿಸುತ್ತಿರುವ ಆಟೋ ರಿಕ್ಷಾದಲ್ಲಿ ನಿಂತುಕೊಂಡು ಬೇಕಾಬಿಟ್ಟಿಯಾಗಿ ಸ್ಟಂಟ್ ಮಾಡಿಕೊಂಡು ಹೋದ ವ್ಯಕ್ತಿಯೊಬ್ಬನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ದೆಹಲಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ (ಡಿ.12 ರಂದು) ಹೇಳಿದ್ದಾರೆ.
ಉತ್ತರ ದೆಹಲಿಯ ರಸ್ತೆಯಲ್ಲಿ ನೂರಾರು ಜನರಿರುವ ಮಾರ್ಗದ ಮಧ್ಯದಲ್ಲಿ ಆಟೋವೊಂದು ವೇಗವಾಗಿ ಹೋಗಿದೆ. ಈ ಆಟೋದ ಹಿಂದೆ ಪ್ರಯಾಣಿಕನಾಗಿ ಕೂರುವ ಬದಲು ವ್ಯಕ್ತಿಯೊಬ್ಬ ಒಂದು ಕೈಯನ್ನು ಗಾಳಿಯಲ್ಲಿ ಬೀಸುತ್ತಾ ನಿಂತುಕೊಂಡು ಸಾಹಸ ಮಾಡಿದ್ದಾನೆ.
ಆಟೋ ಕೂಡ ಆತನ ಉತ್ಸಾಹಕ್ಕೆ ಸಾಥ್ ನೀಡುವಂತೆ ವೇಗವಾಗಿ ವಾಹನ ದಟ್ಣಣೆ ಮಧ್ಯದಲ್ಲೇ ವೇಗವಾಗಿ ಚಲಿಸಿದೆ. ಈ ರೀತಿ ಸಂಚಾರ ನಿಯಮ ಉಲ್ಲಂಘಿಸಿ ಹುಚ್ಚಾಟ ಮೆರೆಯುವಾಗ ಅದೇ ದಾರಿಯಲ್ಲಿ ಹೋಗುತ್ತಿದ್ದ ಸೈಕಲ್ ಸವಾರನೊಬ್ಬನಿಗೆ ಆಟೋದಲ್ಲಿ ನಿಂತುಕೊ ಸಾಹಸ ಮಾಡುತ್ತಿದ್ದಾಗ ವ್ಯಕ್ತಿಯ ಕೈ ತಾಗಿದೆ. ಪರಿಣಾಮ ಸೈಕಲ್ ಸವಾಲ ರಸ್ತೆಯಲ್ಲಿ ಬಿದ್ದಿದ್ದಾನೆ. ಇದನ್ನು ನೋಡಿಕೊಂಡೇ ಆಟೋ ಸೀದಾ ಮುಂದಕ್ಕೆ ಹೋಗಿದೆ.
ಈ ಘಟನೆಯ ವಿಡಿಯೋ ಹಿಂದೆ ಹೋಗುತ್ತಿದ್ದ ವಾಹನದಲ್ಲಿದ್ದ ಕೆಲವರು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಟೋ ಹಾಗೂ ಅದರಲ್ಲಿದ್ದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.