Advertisement

ಜಿಲ್ಲಾ ಕೇಂದ್ರದಲ್ಲೇ ವಿಡಿಯೋ ಕಾನ್ಫರೆನ್ಸ್‌

07:42 PM Mar 21, 2018 | |

ಚಿತ್ರದುರ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ಇಲಾಖೆ ಡಿಜಿಟಲ್‌ ಯುಗದತ್ತ ಹೆಜ್ಜೆ ಇಡುತ್ತಿದೆ. ಶೀಘ್ರದಲ್ಲೇ ಜಿಲ್ಲಾ ಕೇಂದ್ರದಲ್ಲಿ
ಪ್ರತ್ಯೇಕ ವಿಡಿಯೋ ಕಾನ್ಫರೆನ್ಸ್‌ ಆರಂಭಿಸಲಿದೆ. ಇದರಿಂದ ಇಲಾಖೆ ಅಧೀನಕ್ಕೆ ಒಳಪಟ್ಟ 30ಕ್ಕೂ ಹೆಚ್ಚಿನ ಇಲಾಖೆಗಳ ಅಧಿಕಾರಿಗಳು ಇನ್ನು ಮುಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿಡಿಯೋ ಕಾನ್ಫರೆನ್ಸ್‌ಗೆ ಹೋಗಬೇಕಿಲ್ಲ. 2015-16ನೇ ಸಾಲಿನ ರಾಜೀವ್‌ ಗಾಂಧಿ 
ಪಂಚಾಯತ್‌ ಸಶಕ್ತೀಕರಣ ಅಭಿಯಾನ (ಆರ್‌.ಜಿ.ಪಿ.ಎಸ್‌.ಎ) ಯೋಜನೆಯಡಿ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಸಂಪನ್ಮೂಲ ಕೇಂದ್ರಗಳ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಲಾಗಿತ್ತು. 2015-16ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ
ರಾಜೀವ್‌ ಗಾಂಧಿ  ಪಂಚಾಯತ್‌ ಸಶಕ್ತಿಕರಣ ಅಭಿಯಾನ ಯೋಜನೆಯಡಿ ರಾಜ್ಯ ಮಟ್ಟದ ಇ-ಪಂಚಾಯತ್‌ ಅಡಿಯಲ್ಲಿ ಚಿತ್ರದುರ್ಗ
ಜಿಪಂ ಕಚೇರಿ ಆವರಣದಲ್ಲಿ 150 ಲಕ್ಷ ರೂ.ಗಳ ವೆಚ್ಚದಲ್ಲಿ ಹೈಟೆಕ್‌ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 2017, ಮೇ 13 ರಂದು ಉದ್ಘಾಟಿಸಿದ್ದರು. ಇದಾಗಿ ವರ್ಷ ಸಮೀಪಿಸುತ್ತಿದ್ದರೂ ಇನ್ನೂ ವಿಡಿಯೋ ಕಾನ್ಫರೆನ್ಸ್‌ ಭಾಗ್ಯ ಕೂಡಿ ಬಂದಿಲ್ಲ.

Advertisement

ವಿಡಿಯೋ ಕಾನ್ಫರೆನ್ಸ್‌ಗೆ ಅಗತ್ಯವಿರುವ ಡಿಸ್‌ಪ್ಲೇ ಯೂನಿಟ್‌, ಆಡಿಯೂ, ಕ್ಯಾಮೆರಾ ಸೇರಿದಂತೆ ಇತ್ಯಾದಿ ಯಂತ್ರಗಳನ್ನು ಹೈಟೆಕ್‌
ಕಟ್ಟಡದಲ್ಲಿ ಅಳವಡಿಸಲಾಗಿದೆ. ಆದರೆ ಇದರ ಉದ್ಘಾಟನಾ ಸಮಾರಂಭ ಇನ್ನೂ ನಿಗದಿಯಾಗಿಲ್ಲ, ವಿಧಾನಸಭಾ ಚುನಾವಣೆ
ಮಾದರಿ ನೀತಿಸಂಹಿತೆ ಜಾರಿಯಾದರೆ ಈ ಕೇಂದ್ರದ ಉದ್ಘಾಟನೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

 ಪಂಚಾಯತ್‌ರಾಜ್‌ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಪಂಚಾಯತ್‌ ಪ್ರತಿ ನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತರಬೇತಿ
ನೀಡುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಜಿಪಂ ಆವರಣದಲ್ಲಿ ಸಂಪನ್ಮೂಲ ಕೇಂದ್ರ
ನಿರ್ಮಿಸಿದೆ. ಆದರೆ ವಿಡಿಯೋ ಕಾನ್ಫರೆನ್ಸ್‌ ಉದ್ಘಾಟನೆ ಆಗದಿರುವುದರಿಂದ ಸರ್ಕಾರದ ಉದ್ದೇಶ ಈಡೇರುತ್ತಿಲ್ಲ. ಕೇಂದ್ರ ಸರ್ಕಾರದ
ರಾಜೀವ ಗಾಂಧಿ  ಪಂಚಾಯತ್‌ ಸಶಕ್ತೀಕರಣ ಅಭಿಯಾನ್‌ ಯೋಜನೆಯಡಿ ಈ ಸಂಪನ್ಮೂಲ ಕೇಂದ್ರ ನಿರ್ಮಾಣ ಮಾಡಿ ಕೈ ಬಿಟ್ಟಿರುವುದರಿಂದ ಮೂಲ ಉದ್ದೇಶ ಈಡೇರುತ್ತಿಲ್ಲ ಎನ್ನುವುದು ಜನಪ್ರತಿನಿಧಿಗಳ ಆಕ್ಷೇಪ. ಹೈಟೆಕ್‌ ಕಟ್ಟಡದಲ್ಲಿ ಗ್ರಾಪಂ, ತಾಪಂ, ಜಿಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಸೇರಿದಂತೆ ಮತ್ತಿತರ ಅಧಿಕಾರಿಗಳಿಗೆ ತರಬೇತಿ ನೀಡಲು ವ್ಯವಸ್ಥೆ ಇದೆ. ಊಟದ ಹಾಲ್‌, ವಿಶ್ರಾಂತಿ ಕೊಠಡಿ, ಶೌಚ ಮತ್ತು ಸ್ನಾನದ ವ್ಯವಸ್ಥೆ ಇಲ್ಲಿದೆ. ರಾಜ್ಯ ಸರ್ಕಾರದ ವಿಡಿಯೋ ಕಾನ್ಫರೆನ್ಸ್‌ ಹಾಲ್‌ ಮೊದಲ ಮಹಡಿಯಲ್ಲಿದ್ದರೆ, ನೆಲ ಮಹಡಿಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ವಿಡಿಯೋ ಕಾನ್ಫರೆನ್ಸ್‌ ಹಾಲ್‌ ಇದೆ. ಕೇಂದ್ರ ಸರ್ಕಾರದ ವತಿಯಿಂದ ಇಂದಿಗೂ ಯಾವುದೇ ಯಂತ್ರೋಪಕರಣಗಳು ಬಂದಿಲ್ಲ. ಮೇಕ್‌ ಇನ್‌ ಇಂಡಿಯಾ ಮತ್ತು ಡಿಜಿಟಲ್‌ ಇಂಡಿಯಾದ ಮೂಲಕ ಕೇಂದ್ರ ಸರ್ಕಾರ ಸಾಕಷ್ಟು ಪ್ರಗತಿ ಸಾ ಧಿಸಿದ್ದೇವೆ ಹೇಳುತ್ತಿದ್ದರೂ ಇಲ್ಲಿಗೆ ಯಾವುದೇ ವ್ಯವಸ್ಥೆ ಮಾಡದಿರುವುದು ಸೋಜಿಗ ಮೂಡಿಸಿದೆ.

ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಸದೃಢ ಹಾಗೂ ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಹಾಗೂ ಇತರೆ ಅಧಿ ಕಾರಿಗಳಿಗೆ ತರಬೇತಿ, ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರದ
ಉದ್ಘಾಟನೆ ಬೇಗ ಆಗಬೇಕು. ಇಲ್ಲದಿದ್ದರೆ ಸರ್ಕಾರದ ಉದ್ದೇಶವೇ ಈಡೇರುವುದಿಲ್ಲ.

ಸೌಭಾಗ್ಯ ಬಸವರಾಜನ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷರು.

ವಿಡಿಯೋ ಕಾನ್ಫರೆನ್ಸ್‌ಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ನೆಲ ಮಹಡಿಯನ್ನು ಕೇಂದ್ರ ಸರ್ಕಾರದ ಎನ್‌ಐಸಿಗೆ ನೀಡಲಾಗಿದೆ. ಇ-ಆಡಳಿತ ವಿಡಿಯೋ ಕಾನ್ಫರೆನ್ಸ್‌ ಕೇಂದ್ರದ ಉದ್ಘಾಟನೆ ಆಗಬೇಕಿದೆ. ಈಗಾಗಲೇ ಮುಖ್ಯಮಂತ್ರಿಗಳು ಕಟ್ಟಡ ಉದ್ಘಾಟಿಸಿದ್ದಾರೆ.
ಎಚ್‌. ಶಶಿಧರ, ಜಿಲ್ಲಾ ಯೋಜನಾ ವ್ಯವಸ್ಥಾಪಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next