ಗುಜರಾತ್: ಮಕ್ಕಳು ತರಗತಿಯಲ್ಲಿ ಇರುವ ವೇಳೆಯೇ ಶಾಲಾ ಕೊಠಡಿಯ ಗೋಡೆ ಕುಸಿದು ಬಿದ್ದು ಮಕ್ಕಳು ಗಾಯಗೊಂಡಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ ಶುಕ್ರವಾರ ನಡೆದಿದೆ.
ನಗರದ ವಾಘೋಡಿಯಾ ರಸ್ತೆಯಲ್ಲಿರುವ ಶ್ರೀ ನಾರಾಯಣ ಗುರುಕುಲ ಶಾಲೆಯ ಮೊದಲ ಮಹಡಿಯಲ್ಲಿರುವ ಶಾಲಾ ಕೊಠಡಿ ಕುಸಿದು ಬಿದ್ದಿದ್ದು ಇದರ ವಿಡಿಯೋ ತರಗತಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶಾಲೆಯ ಪ್ರಾಂಶುಪಾಲರ ಪ್ರಕಾರ, ಶುಕ್ರವಾರ ಮಧ್ಯಾಹ್ನ 12.30 ರ ಸುಮಾರಿಗೆ ಊಟದ ವಿರಾಮದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು ದೊಡ್ಡ ಸದ್ದು ಕೇಳಿದೆ ಕೂಡಲೇ ಏನೆಂದು ಬಂದು ನೋಡಿದಾಗ ಏಳನೇ ತರಗತಿಯ ಕೊಠಡಿಯ ಒಂದು ಭಾಗ ಕುಸಿದು ಬಿದ್ದಿತ್ತು ಅಲ್ಲದೆ ನಾಲ್ವರು ವಿದ್ಯಾರ್ಥಿಗಳು ಕೆಳಗೆ ಬಿದ್ದಿರುವುದು ಗೊತ್ತಾಗಿದೆ ಕೂಡಲೇ ಎಚ್ಚೆತ್ತ ನಾವು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದೆವು ಆದರೆ ಓರ್ವ ವಿದ್ಯಾರ್ಥಿಗೆ ಮಾತ್ರ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಉಳಿದವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.
ಘಟನೆ ನಡೆದ ಕೂಡಲೇ ಅಗ್ನಿ ಶಾಮಕಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದು ಕೂಡಲೇ ಬಂದ ಸಿಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸೈಕಲ್ ನಿಲ್ಲಿಸಲು ಮೀಸಲಿಟ್ಟ ಜಾಗದ ಮೇಲೆ ಗೋಡೆ ಕುಸಿದು ಬಿದ್ದ ಪರಿಣಾಮ ಹಲವಾರು ಸೈಕಲ್ ಜಖಂಗೊಂಡಿದೆ, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಇದನ್ನೂ ಓದಿ: Desi Swara: ಓಝೀ ಎಂಬ “ಗೂಳಿ’- ಜನರ ಮನಗೆದ್ದ ಕಾಮನ್‌ವೆಲ್ತ್‌ನ ಲೋಹದ ಪ್ರತಿಮೆ