Advertisement

ಉಡುಪಿಯ ವೀಡಿಯೋ ಪ್ರಕರಣ: ಕರಾವಳಿ ಶಾಸಕರಿಂದ ರಾಜ್ಯಪಾಲರ ಭೇಟಿ

11:44 PM Aug 04, 2023 | Team Udayavani |

ಬೆಂಗಳೂರು: ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಕರಾವಳಿ ಶಾಸಕರ ನಿಯೋಗವು ರಾಜ್ಯಪಾಲರಿಗೆ ದೂರು ನೀಡಿದೆ.

Advertisement

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶಾಸಕರಾದ ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್‌, ರಾಜೇಶ್‌ ನಾೖಕ್‌, ಭಾಗೀರಥಿ ಮುರುಳ್ಯ, ಯಶ್‌ಪಾಲ್‌ ಸುವರ್ಣ, ಕಿರಣ್‌ ಕೊಡ್ಗಿ, ಸುರೇಶ್‌ ಶೆಟ್ಟಿ, ಗುರ್ಮೆ, ಗುರುರಾಜ್‌ ಶೆಟ್ಟಿ ಗಂಟಿಹೊಳಿ ಅವರು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ ದೂರು ನೀಡಿದರು.
ಈ ಘಟನೆಯನ್ನು ವಿರೋಧಿಸಿ ಉಡುಪಿಯಲ್ಲಿ ವಿಶ್ವಹಿಂದೂ ಪರಿಷತ್‌, ಬಜರಂಗದಳ ಸಹಿತ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದ್ದು, ಘಟನೆಯ ಗಂಭೀರತೆಯನ್ನು ಶಾಸಕರ ನಿಯೋಗ ಮನವರಿಕೆ ಮಾಡಿಕೊಟ್ಟಿದೆ.

ಎಸ್‌ಐಟಿ ತನಿಖೆಗೆ ಮನವಿ: ಕೋಟ ಶ್ರೀನಿವಾಸ ಪೂಜಾರಿ
ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಕೋಟ ಶ್ರೀನಿವಾಸ್‌ ಪೂಜಾರಿ, ಹೆಣ್ಣುಮಕ್ಕಳ ಗೌರವ ಹಾಗೂ ಖಾಸಗಿತನಕ್ಕೆ ಧಕ್ಕೆ ತರುವ ಅತ್ಯಂತ ಹೇಯ ಕೃತ್ಯ ಇದಾಗಿದೆ. ಈ ಬಗ್ಗೆ ಎಸ್‌ಐಟಿಯಿಂದ ತನಿಖೆ ನಡೆಸಬೇಕೆಂದು ನಾವು ಸರಕಾರದ ಮೇಲೆ ಒತ್ತಡ ಹೇರಿದ್ದೇವೆ. ಆದರೆ ಸರಕಾರ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದೆ. ಪ್ರಕರಣದ ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ. ಸರಕಾರ ಈ ವಿಚಾರದಲ್ಲಿ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

ವೀಡಿಯೋ ಮಾಡಿದ ಆರೋಪ ಹೊತ್ತಿರುವ ಯುವತಿಯರ ಕುಟುಂಬ ವರ್ಗದವರು ಈ ಹಿಂದೆ ಪಿಎಫ್ಐ ಸಂಘಟನೆಯ ಜತೆಗೆ ಸಂಪರ್ಕ ಹೊಂದಿರುವ ಆರೋಪ ಇದೆ. ಹೀಗಾಗಿ ಈ ಕೃತ್ಯ ಒಂದು ಸಂಘಟಿತ ಪ್ರಯತ್ನದಂತೆ ತೋರುತ್ತದೆ. ನಾಮಕಾವಾಸ್ತೆ ತನಿಖೆ ನಡೆಸಿದರೆ ಸತ್ಯ ಹೊರಬರುವುದಿಲ್ಲ. ನಮ್ಮ ಆಗ್ರಹ ಏನೆಂಬುದನ್ನು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಒಪ್ಪುವ ವಿಶ್ವಾಸ ಇದೆ ಎಂದರು.

ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ಈ ಗಂಭೀರ ಘಟನೆಯನ್ನು ಸರಕಾರ ಮಕ್ಕಳಾಟ ಎಂದು ಪರಿಗಣಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದೆ. ಈ ಘಟನೆಯಿಂದ ಉಡುಪಿಯ ಜನರು ತಲೆತಗ್ಗಿಸುವಂತಾಗಿದೆ. ಆರೋಪಿಗಳ ವಿರುದ್ಧ ತತ್‌ಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next