ಲಕ್ನೋ: ಬುರ್ಖಾ ಧರಿಸಿಕೊಂಡು ಕಾಲೇಜುವೊಂದರಲ್ಲಿ ಫ್ಯಾಷನ್ ಶೋ ನಡೆಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಪ್ರದೇಶದ ಕಾಲೇಜೊಂದರಲ್ಲಿ ಮುಸ್ಲಿಂ ಯುವತಿಯರ ನೇತೃತ್ವದಲ್ಲಿ ನಡೆದ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಮುಜಫರ್‌ನಗರದ ಶ್ರೀರಾಮ್ ಗ್ರೂಪ್ ಆಫ್ ಕಾಲೇಜಿನಲ್ಲಿ ಭಾನುವಾರ ರಾತ್ರಿ (ನ.26 ರಂದು) ‘ಸ್ಪ್ಲಾಶ್ 2023’ ಫ್ಯಾಷನ್ ಶೋ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಕೊಂಡು ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ.
“ನಮಗೆ ಬುರ್ಖಾ ಕೇವಲ ಮನೆಯಲ್ಲಿ ಧರಿಸುವ ಉಡುಪು ಮಾತ್ರವಲ್ಲದೆ, ಅದೊಂದು ಫ್ಯಾಷನ್ ಶೋನಲ್ಲೂ ಬಳಸಬೇಕೆಂದು ಅನ್ನಿಸಿತು. ಶಾರ್ಟ್ ಡ್ರೆಸ್‌ಗಳನ್ನು ಧರಿಸುವ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಮುಸ್ಲಿಂ ಸಮುದಾಯದ ಮಹಿಳೆಯರಿಗಾಗಿ ಏನಾದರೂ ಮಾಡಬೇಕೆಂದು ನಾವು ಬಯಸಿದ್ದೆವು. ಹಾಗಾಗಿ ಬುರ್ಖಾ ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದೇವೆ ಎಂದು ವೇದಿಕೆಯಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರಲ್ಲಿ ಒಬ್ಬರಾಗಿರುವ ಆಲಿನಾ ಹೇಳಿದ್ದಾರೆ.
ವಿದ್ಯಾರ್ಥಿನಿಯರ ಈ ಯೋಜನೆಯನ್ನು ಬೆಂಬಲಿಸಿ ಮಾತನಾಡಿದ ಶಿಕ್ಷಕ ಮನೋಜ್, “ಹಿಜಾಬ್ ಅಥವಾ ಬುರ್ಖಾ ಮುಸ್ಲಿಂ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಇದರಿಂದ ಜಾಗತಿಕವಾಗಿ ಈ ಉಡುಪುಗಳಿಗೆ ಸಂಬಂಧಿಸಿದ ಫ್ಯಾಷನ್‌ಗಳಲ್ಲಿ ಅವರು ಭಾಗಿಯಾಗಲು ಹೆಚ್ಚಿನ ಅವಕಾಶಗಳಿರುತ್ತವೆ” ಎಂದರು.
ಇನ್ನೊಂದೆಡೆ ಬುರ್ಖಾ ಫ್ಯಾಷನ್ ಶೋ ವಿರೋಧ ವ್ಯಕ್ತಪಡಿಸಿರುವ ಜಮೀಯತೆ ಉಲೇಮಾ ಜಿಲ್ಲಾ ಸಂಚಾಲಕ ಮೌಲಾನಾ ಮುಕರಂ ಖಾಸ್ಮಿ, “ಬುರ್ಖಾವು ಫ್ಯಾಶನ್ ಪ್ರದರ್ಶನದ ವಸ್ತುವಲ್ಲ. ಇಂತಹ ಕೃತ್ಯಗಳು ಒಂದು ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುತ್ತದೆ. ಇದು ಮುಸ್ಲಿಂ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸುತ್ತದೆ. ಮುಂದೆ ಇಂತಹ ಘಟನೆಗಳು ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನೀವು ಫ್ಯಾಷನ್ ಶೋ ನಡೆಸಿದರೆ ನಡೆಸಿ, ಆದರೆ ಒಂದು ಸಮುದಾಯವನ್ನು ಗುರಿಯಾಗಿಸಿ ಇಂಥದ್ದನ್ನು ಆಯೋಜಿಸಬೇಡಿ ಎಂದು ಅವರು ಹೇಳಿದ್ದಾರೆ.