Advertisement
ವಿದರ್ಭವೀಗ 233 ರನ್ನುಗಳ ಬೃಹತ್ ಮುನ್ನಡೆಯಲ್ಲಿದ್ದು, ಇನ್ನೂ 3 ವಿಕೆಟ್‌ಗಳನ್ನು ಉಳಿಸಿಕೊಂಡಿದೆ. ಪಂದ್ಯ ಅಕಸ್ಮಾತ್ ಡ್ರಾಗೊಂಡರೂ ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಚೊಚ್ಚಲ ರಣಜಿ ಕಿರೀಟ ಏರಿಸಿಕೊಳ್ಳಲಿದೆ. ಪಂದ್ಯವಿನ್ನೂ 2 ದಿನ ಕಾಣಲಿಕ್ಕಿದ್ದರೂ ದಿಲ್ಲಿಯ 8ನೇ ರಣಜಿ ಪಟ್ಟ ಬಹುತೇಕ ಮರೀಚಿಕೆಯಾಗಿದೆ.
4 ವಿಕೆಟಿಗೆ 206 ರನ್ ಗಳಿಸಿದಲ್ಲಿಂದ ರವಿವಾರದ ಆಟವನ್ನು ಮುಂದುವರಿಸಿದ ವಿದರ್ಭ, ಒಂದು ಹಂತದಲ್ಲಿ ದಿಢೀರ್ ಕುಸಿತಕ್ಕೆ ಸಿಲುಕಿತ್ತು. ಕ್ರೀಸ್ ಆಕ್ರಮಿಸಿಕೊಂಡಿದ್ದ ವಾಸಿಮ್ ಜಾಫರ್ ಸಹಿತ 6 ವಿಕೆಟ್‌ಗಳು 246ರ ಮೊತ್ತದಲ್ಲಿ ಉರುಳಿ ಹೋಗಿದ್ದವು. ಆಗ ದಿಲ್ಲಿಗೆ ಇನ್ನಿಂಗ್ಸ್ ಮುನ್ನಡೆ ಬಹುತೇಕ ಖಚಿತ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ವಿಕೆಟ್ ಕೀಪರ್ ಅಕ್ಷಯ್ ವಾಡ್ಕರ್ ದಿಲ್ಲಿ ಆಕ್ರಮಣವನ್ನು ದಿಟ್ಟವಾಗಿ ನಿಭಾಯಿಸಿ ಕ್ರೀಸ್ ಆಕ್ರಮಿಸಿಕೊಳ್ಳುವುದರೊಂದಿಗೆ ಪಂದ್ಯದ ಚಿತ್ರಣವೇ ಬದಲಾಗತೊಡಗಿತು. ಅವರಿಗೆ ಬೌಲರ್‌ಗಳಾದ ಆದಿತ್ಯ ಸರ್ವಟೆ ಮತ್ತು ಸಿದ್ದೇಶ್ ನೆರಾಲ್ ಅಮೋಘ ಬೆಂಬಲ ಒದಗಿಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ವಾಡ್ಕರ್ ಅಜೇಯ 133 ರನ್ ಮಾಡಿದ್ದು, ಇವರೊಂದಿಗೆ ನೆರಾಲ್ 56 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸರ್ವಟೆ 79 ರನ್ ಬಾರಿಸಿ ಮಿಂಚಿದರು.
Related Articles
Advertisement
ಸ್ಕೋರ್ 415 ರನ್ ಆಗಿದ್ದಾಗ ನಿತೀಶ್ ರಾಣ ಈ ಜೋಡಿಯನ್ನು ಬೇರ್ಪಡಿಸಿದರು. ಆದರೆ ಅನಂತರ ಬ್ಯಾಟ್ ಹಿಡಿದು ಬಂದ ಸಿದ್ದೇಶ್ ನೆರಾಲ್ ಕೂಡ ವಿದರ್ಭ ಪಾಲಿಗೆ ನೆರಳಾಗಿ ನಿಂತರು. ಎಂದೂ 12 ರನ್ ಗಡಿ ದಾಟದ ನೆರಾಲ್ ಆಕ್ರಮಣಕಾರಿ ಆಟಕ್ಕಿಳಿದು 92 ಎಸೆತಗಳಿಂದ 56 ರನ್ ಬಾರಿಸಿದ್ದಾರೆ. ಇದರಲ್ಲಿ 4 ಬೌಂಡರಿ ಹಾಗೂ 4 ಪ್ರಚಂಡ ಸಿಕ್ಸರ್ ಒಳಗೊಂಡಿದೆ. ವಾಡ್ಕರ್-ನೆರಾಲ್ ಮುರಿಯದ 8ನೇ ವಿಕೆಟಿಗೆ 113 ರನ್ ಪೇರಿಸಿದ್ದು ವಿದರ್ಭದ ಬ್ಯಾಟಿಂಗ್ ವೈಭವವಕ್ಕೆ ಸಾಕ್ಷಿಯಾಯಿತು.
ಬೌಲಿಂಗ್ ಲಾಭವೆತ್ತದ ದಿಲ್ಲಿನಾಟೌಟ್ ಬ್ಯಾಟ್ಸ್‌ಮನ್‌ಗಳಾದ ವಾಸಿಮ್ ಜಾಫರ್-ಅಕ್ಷಯ್ ವಖಾರೆ ಬ್ಯಾಟಿಂಗ್ ಮುಂದುವರಿಸಿ ಮೊತ್ತವನ್ನು 237ರ ತನಕ ತಂದರು. ಆಗ 17 ರನ್ ಮಾಡಿದ ಸೈನಿ ಅವರನ್ನು ನವದೀಪ್ ಸೈನಿ ಪೆವಿಲಿಯನ್ನಿಗೆ ಅಟ್ಟಿದರು. 9 ರನ್ ಆಗುವಷ್ಟರಲ್ಲಿ ಮತ್ತೂಂದು ಬೇಟೆಯಾಡಿದ ಸೈನಿ, ಅನುಭವಿ ಜಾಫರ್ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಭರ್ತಿ 150 ಎಸೆತ ನಿಭಾಯಿಸಿದ ಜಾಫರ್ 11 ಬೌಂಡರಿ ನೆರವಿನಿಂದ 78 ರನ್ ಕೊಡುಗೆ ಸಲ್ಲಿಸಿದರು. ಈ ಹಂತದಲ್ಲಿ ದಿಲ್ಲಿ ಮೇಲುಗೈ ಉಳಿಸಿಕೊಂಡು ಮುನ್ನಡೆ ಗಳಿಸಬೇಕಿತ್ತು. ಆದರೆ ಕ್ಷಿಪ್ರ ಕುಸಿತದಿಂದ ಚೇತರಿಸಿಕೊಂಡ ವಿದರ್ಭ ಐನೂರರ ಗಡಿ ದಾಟಿ ಪವಾಡವನ್ನೇ ಸಾಧಿಸಿತು! ಕಳಪೆ ಫೀಲ್ಡಿಂಗ್, ನಾಯಕ ರಿಷಬ್ ಪಂತ್ ಅವರ ಅನುಭವದ ಕೊರತೆ ದಿಲ್ಲಿ ಹಿನ್ನಡೆಗೆ ಪ್ರಮುಖ ಕಾರಣ. ಕೈ ಬೆರಳಿನ ಗಾಯದಿಂದಾಗಿ ಲಂಚ್ ಬಳಿಕ ಗಂಭೀರ್ ಕೂಡ ಅಂಗಳಕ್ಕಿಳಿಯಲಿಲ್ಲ. ಹೀಗಾಗಿ ದಿಲ್ಲಿಗೆ ಸೂಕ್ತ ಮಾರ್ಗದರ್ಶಕರ ಕೊರತೆಯೂ ಎದುರಾಯಿತು. ಸಂಕ್ಷಿಪ್ತ ಸ್ಕೋರ್: ದಿಲ್ಲಿ-295. ವಿದರ್ಭ-7 ವಿಕೆಟಿಗೆ 528 (ವಾಡ್ಕರ್ ಬ್ಯಾಟಿಂಗ್ 133, ಸರ್ವಟೆ 79, ಜಾಫರ್ 78, ನೆರಾಲ್ ಬ್ಯಾಟಿಂಗ್ 56, ಸೈನಿ 126ಕ್ಕೆ 3, ಸುದಾನ್ 102ಕ್ಕೆ 2).