Advertisement

ಗೆಲುವು ಸಂಭ್ರಮವಷ್ಟೇ ಅಲ್ಲ, ದೊಡ್ಡ ಜವಾಬ್ದಾರಿ ಕೂಡ

01:14 AM Mar 11, 2022 | Team Udayavani |

ದೇಶಾದ್ಯಂತ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಉತ್ತರ ಪ್ರದೇಶವೂ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಮುಗಿದು, ಫ‌ಲಿತಾಂಶವೂ ಪ್ರಕಟವಾಗಿದೆ. ಮತದಾರನ ಬುದ್ಧಿವಂತಿಕೆಯನ್ನು ಅಷ್ಟು ಸುಲಭವಾಗಿ ಯಾರೂ ಅಳೆಯಲು ಸಾಧ್ಯವಿಲ್ಲ. ಅದಕ್ಕೆ ಬಹುದೊಡ್ಡ ಉತ್ತರವೇ ಈಗ ಪ್ರಕಟವಾಗಿರುವ ಫ‌ಲಿತಾಂಶ.

Advertisement

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಮತ್ತೊಮ್ಮೆ ಬಿಜೆಪಿಯೇ ಆಡಳಿತಕ್ಕೇರಲಿದೆ. ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಆಮ್‌ ಆದ್ಮಿ ಪಕ್ಷ (ಆಪ್‌) ಪ್ರಚಂಡ ಗೆಲುವು ಸಾಧಿಸಿದೆ. ದಿಲ್ಲಿಯ ಹೊರಗೆ ಆಪ್‌ ಅಧಿಕಾರಕ್ಕೇರುವ ಮೊದಲ ರಾಜ್ಯವಾಗಿ ಪಂಜಾಬ್‌ ಗುರುತಿಸಿಕೊಳ್ಳಲಿದೆ ಎಂಬುದು ವಿಶೇಷ.

ಈ ಫ‌ಲಿತಾಂಶದಿಂದ ಸಿಕ್ಕ ಉತ್ತರವೆಂದರೆ ಅಭಿವೃದ್ಧಿ ಕೆಲಸ ಮಾಡಿದರಷ್ಟೇ ಮತದಾರ ಆಶೀರ್ವಾದ ಮಾಡುತ್ತಾನೆ, ಬರೀ ರಾಜಕೀಯ ಮಾಡಿಕೊಂಡು ಸಮಾಜದ ಏಳಿಗೆಗೆ ಪ್ರಯತ್ನಿಸದಿದ್ದರೆ ಮುಲಾಜಿಲ್ಲದೇ ತಿರಸ್ಕರಿಸುತ್ತಾನೆ ಎಂಬುದು. ಅಷ್ಟೇ ಅಲ್ಲ, ಮತದಾರ ಗೆದ್ದ ಮತ್ತು ಸೋತ ಎಲ್ಲ ಪಕ್ಷಗಳಿಗೂ ತಕ್ಕ ಪಾಠವನ್ನೇ ಕಲಿಸಿದ್ದಾನೆ. ಯಾವುದೇ ಜಾತಿ, ಧರ್ಮದ ಓಲೈಕೆ ರಾಜಕಾರಣಕ್ಕಿಂತ ಸದೃಢ ಹಾಗೂ ಪ್ರಗತಿಗೆ ಪೂರಕವಾದ ಆಡಳಿತಕ್ಕೆ ಮತದಾರ ಮನ್ನಣೆ ನೀಡುತ್ತಾನೆ ಎನ್ನುವುದು ಈಗ ಪ್ರಕಟವಾಗಿರುವ ಐದು ರಾಜ್ಯಗಳ ಚುನಾವಣ ಫ‌ಲಿತಾಂಶದಲ್ಲಿ ಸ್ಪಷ್ಟವಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಮತದಾರ ಮತ ಹಾಕಿರುವುದು ಖಚಿತ. ಇತರ ಜತೆಗೆ ಕಳೆದ ಸಲಕ್ಕಿಂತ ಕಡಿಮೆ ಸ್ಥಾನಗಳನ್ನು ನೀಡುವ ಮೂಲಕ ಒಂದು ಬಗೆಯ ಎಚ್ಚರಿಕೆಯ ಸಂದೇಶವನ್ನು ನೀಡಲೂ ಮರೆಯಲಿಲ್ಲ. ಈ ರಾಜ್ಯದಲ್ಲಿ ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಮತ್ತಷ್ಟು ಉತ್ತಮ ಆಡಳಿತ ನೀಡಲು ಗಮನ ನೀಡಬೇಕು. ಉತ್ತರಾಖಂಡದಲ್ಲೂ ಅಭಿವೃದ್ಧಿಯೇ ಬಿಜೆಪಿಯ ಕೈ ಹಿಡಿದಿದೆ. ಇಲ್ಲಿ 3 ಬಾರಿ ಮುಖ್ಯಮಂತ್ರಿಗಳ ಬದಲಾವಣೆಯಾದರೂ ಮತದಾರರು ಆ ಅಸ್ಥಿರತೆಗೆ ಗಮನ ನೀಡದೆ, ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದಾರೆ.

ಇನ್ನು ಪಂಜಾಬಿನ ಫ‌ಲಿತಾಂಶ ಬೇರೆಯದ್ದೇ ಮುನ್ಸೂಚನೆ ನೀಡಿದೆ. ಆಡಳಿತವಷ್ಟೇ ನಮ್ಮ ಆದ್ಯತೆ, ಇದನ್ನು ಬಿಟ್ಟು ಉಳಿದ ರಾಜಕೀಯ ಮಾಡುವುದಿಲ್ಲ ಎಂದು ಭರವಸೆ ನೀಡಿದ ಆಪ್‌ಗೆ ಮತದಾರ ಭರ್ಜರಿಯಾಗಿಯೇ ಆಶೀರ್ವಾದ ಮಾಡಿದ್ದಾನೆ. ಇಲ್ಲಿ ಒಳಜಗಳವೇ ಕಾಂಗ್ರೆಸ್‌ಗೆ ಮುಳುವಾಯಿತು. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯ ವಿವಾದ, ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಧು ಮತ್ತು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚ‌ನ್ನಿ ನಡುವಿನ ಗುದ್ದಾಟ, ಕ್ಯಾ|ಅಮರೀಂದರ್‌ಗೆ ಅವಮಾನ ಸಂಗತಿಗಳು ಹೆಚ್ಚಾಗಿ ಕಾಡಿದವು. ಹೀಗಾಗಿ ರಾಜ್ಯದ ಮತದಾರ ಆಡಳಿತದಲ್ಲಿದ್ದ ಕಾಂಗ್ರೆಸ್‌ನ ಈ ಒಳಜಗಳ ಮತ್ತು ಆಪ್‌ ಅನ್ನು ಪರ್ಯಾಯವೆಂದು ಅರಿತೇ ಹೆಚ್ಚಾಗಿ ಮತಹಾಕಿದರು. ಈ ರಾಜ್ಯದ ಫ‌ಲಿತಾಂಶ ಕಾಂಗ್ರೆಸ್‌ಗೆ ಬಹುದೊಡ್ಡ ಪಾಠವೇ.

Advertisement

ಉಳಿದಂತೆ ಫ‌ಲಿತಾಂಶದ ಸಂಭ್ರಮದ ಜತೆ ಜತೆಗೇ ಆಯಾ ರಾಜ್ಯಗಳಲ್ಲಿ ಕೊರೊನೋತ್ತರದ ಸಮಸ್ಯೆಗಳು ಒಳಗೊಂಡಂತೆ ಹಲವು ಸಮಸ್ಯೆಗಳು ಇನ್ನೂ ಬಾಧಿಸುತ್ತಲೇ ಇವೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಆಡಳಿತ ನೀಡಬೇಕಾದ ಕರ್ತವ್ಯ ಎಲ್ಲರದೂ ಆಗಿದೆ. ಇದನ್ನು ಮರೆಯದಿರಲಿ ಎಂಬುದೇ ಜನರ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next