Advertisement

ಯುದ್ಧದಲ್ಲಿ ಗೆಲುವು ನಮ್ಮದೇ: ಉಕ್ರೇನ್‌, ರಷ್ಯಾ ವಿಶ್ವಾಸ

11:26 PM Feb 24, 2023 | Team Udayavani |

ಮಾಸ್ಕೊ: ರಷ್ಯಾ-ಉಕ್ರೇನ್‌ ಯುದ್ಧ ಆರಂಭವಾಗಿ ಶುಕ್ರವಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ತಮ್ಮ ತಮ್ಮ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಯುದ್ಧದಲ್ಲಿ ಗೆಲುವು ತಮ್ಮದೇ ಎಂದು ಉಭಯ ನಾಯಕರು ಘೋಷಿಸಿದ್ದಾರೆ.

Advertisement

ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ, ಕಳೆದ ಒಂದು ವರ್ಷದಿಂದ ರಷ್ಯಾ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಉಕ್ರೇನ್‌ ಯೋಧರ ಧೈರ್ಯ ಹಾಗೂ ನಾಗರಿಕರ ಸಹಕಾರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. “ಕಳೆದ ವರ್ಷ ಫೆ.24ರಂದು ಉಕ್ರೇನ್‌ ನಾಗರಿಕರಾದ ನಾವೆಲ್ಲರೂ ನಮ್ಮ ರಾಷ್ಟ್ರ ಧ್ವಜವನ್ನು ಎತ್ತಿಹಿಡಿಯುವ ಸಂಕಲ್ಪ ಮಾಡಿದೆವು. ಓಡಿ ಹೋಗದೇ, ನಿಂತು ಎದುರಿಸಿದೆವು. ವಿರೋಧಿಸಿದೆವು ಮತ್ತು ಹೋರಾ ಡಿದೆವು. ಇದು ನೋವು, ದುಃಖ, ನಂಬಿಕೆ ಮತ್ತು ಏಕತೆಯ ವರ್ಷವಾಗಿತ್ತು. ಈ ವರ್ಷ ನಾವು ಅಜೇಯರಾಗಿ ಉಳಿದೆವು. 2023ರಲ್ಲಿ ನಾವು ಈ ಯುದ್ಧದಲ್ಲಿ ಜಯಶೀಲರಾಗಲಿದ್ದೇವೆ,’ ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇನ್ನೊಂದೆಡೆ ರಷ್ಯಾ ಅಧ್ಯಕ್ಷ ಪುಟಿನ್‌ ಮಾತನಾಡಿ, ಉಕ್ರೇನ್‌ ವಿರುದ್ಧ ರಷ್ಯಾ ಗೆಲುವು ಶತಃಸಿದ್ಧ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. “ಅಗತ್ಯಬಿದ್ದರೆ ರಷ್ಯಾ ಸೇನೆಯು ಪೋಲೆಂಡ್‌ ಗಡಿಯವರೆಗೆ ಉಕ್ರೇನ್‌ ಅನ್ನು ಹಿಮ್ಮೆಟ್ಟಿಸಲಿದೆ. ಉಕ್ರೇನ್‌ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾ ಚರಣೆಯ ಉದ್ದೇಶಗಳನ್ನು ಸಾಧಿಸುವುದು ಅಗತ್ಯ,’ ಎಂದು ರಷ್ಯಾ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್‌ ಹೇಳಿದ್ದಾರೆ.

ನೀಲಿ-ಹಳದಿ ಲೈಟಿಂಗ್‌: ಯುದ್ಧಕ್ಕೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಪ್ಯಾರಿಸ್‌ನ ಐಫೆಲ್‌ ಟವರ್‌, ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ ಐರೋಪ್ಯ ಒಕ್ಕೂಟದ ಕಟ್ಟಡಗಳು ಮತ್ತು ಸಂಸತ್‌ ಅನ್ನು ಉಕ್ರೇನ್‌ ರಾಷ್ಟ್ರ ಧ್ವಜದ ಬಣ್ಣವಾದ ನೀಲಿ ಮತ್ತ ಹಳದಿ ಬಣ್ಣದ ಲೈಟಿಂಗ್‌ನಿಂದ ಆಲಂಕರಿಸಲಾಗಿತ್ತು.

ಮಹಾತ್ಮ ಗಾಂಧಿ ಸಂದೇಶ ಪಾಲಿಸಿ
ಉಕ್ರೇನ್‌-ರಷ್ಯಾ ಯುದ್ಧಕ್ಕೆ ಒಂದು ವರ್ಷದ ಸಂದರ್ಭದಲ್ಲೇ ವಿಶ್ವಸಂಸ್ಥೆಯಲ್ಲಿ ಭಾರತ, ಮಹಾತ್ಮ ಗಾಂಧಿ ಅವರು ಕುರಿತು “ಗಾಂಧಿಯನ್‌ ಟ್ರಸ್ಟಿಶಿಪ್‌: ಮಿಷನ್‌ ಲೈಫ್ ಆ್ಯಂಡ್‌ ಹ್ಯೂಮನ್‌ ಫ್ಲೋರಿಶಿಂಗ್‌’ ಎಂಬ ಉನ್ನತ ಮಟ್ಟದ ಸಂವಾದ ಏರ್ಪಡಿಸಿತ್ತು. ಇಂದಿನ ದಿನದಲ್ಲಿ ರಾಷ್ಟ್ರಗಳು ಮಹಾತ್ಮ ಗಾಂಧಿ ಅವರ ಶಾಂತಿ, ನಂಬಿಕೆಯ ಉನ್ನತ ಆರ್ದಶಗಳನ್ನು ಪಾಲಿಸಬೇಕು ಎಂಬ ಸಂದೇಶ ಸಾರಲಾಯಿತು. ಇನ್ನೊಂದೆಡೆ, ಉಕ್ರೇನ್‌ ಯುದ್ಧ ಖಂಡಿಸಿ, ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ವೇಳೆ ಭಾರತ ಹಿಂದಿನಂತೆ ತಟಸ್ಥವಾಗಿ ಉಳಿಯಿತು.

Advertisement

ಭಾರತ ಮೂಲದ ಬಾಲಕ ಸಹಾಯಹಸ್ತ
ರಷ್ಯಾ ಯುದ್ಧದಿಂದಾಗಿ ಸಾವಿರಾರು ಉಕ್ರೇನ್‌ ನಿರಾಶ್ರಿತರು ಪೋಲೆಂಡ್‌ಗೆ ತೆರಳಿ ಅಲ್ಲಿ ನೆಲೆಸಿದ್ದಾರೆ. ಇವರ ಸಹಾಯಕ್ಕಾಗಿ ಭಾರತ ಮೂಲದ 10 ವರ್ಷದ ಬಾಲಕ, ತನ್ನ ಪೋಷಕರೊಂದಿಗೆ ಪೋಲೆಂಡ್‌ಗೆ ಭೇಟಿ ನೀಡಿ, ಅಲ್ಲಿರುವ ಉಕ್ರೇನ್‌ ಮಕ್ಕಳಿಗೆ ಪುಸ್ತಕಗಳು ಹಾಗೂ ಇತೆರೆ ಸ್ಟೇಷನರಿ ವಸ್ತುಗಳನ್ನು ತಲುಪಿಸಿದ್ದಾನೆ. ಇಂಗ್ಲೆಂಡ್‌ನ‌ ಬೋಲ್ಟನ್‌ ನಿವಾಸಿಯಾಗಿರುವ ಮಿಲನ್‌ ಪೌಲ್‌ ಕುಮಾರ್‌ ಇದಕ್ಕಾಗಿ ಸಾರ್ವಜನಿಕರಿಂದ ಪುಸ್ತಕಗಳನ್ನು ಸಂಗ್ರಹಿಸಿ, ಪೋಲೆಂಡ್‌ನ‌ ಕ್ರಾಕೋವ್‌ ನಗರಕ್ಕೆ ಬಂದು ಹಂಚಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next