Advertisement

ನೆಲಮಂಗಲ ಪುರಸಭೆ ಸದಸ್ಯರ ಕಾನೂನು ಹೋರಾಟಕ್ಕೆ ಗೆಲುವು

12:20 PM Nov 02, 2021 | Team Udayavani |

ನೆಲಮಂಗಲ: 2019ರ ಜೂ.3ರಂದು ಪ್ರಕಟವಾಗಿದ್ದ ಪುರಸಭೆ ಚುನಾವಣಾ ಫ‌ಲಿತಾಂಶಕ್ಕೆ ಸುಮಾರು 16ತಿಂಗಳು ನಡೆದ ಕಾನೂನು ಹೋರಾಟದಲ್ಲಿ ಚುನಾಯಿತ ಜನಪ್ರತಿನಿಧಿಗಳ ಪರವಾಗಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಈ ಬೆನ್ನಲ್ಲೇ ಪುರಸಭೆ ಸದಸ್ಯರನ್ನು ನಗರಸಭೆ ಸದಸ್ಯರನ್ನಾಗಿಸಿದ್ದಲ್ಲದೆ ಪುರಸಭೆ ಮತ್ತು ನಗರಸಭೆಗೆ ವಿಲೀನಗೊಂಡ ಗ್ರಾಪಂ ವ್ಯಾಪ್ತಿಯ ಮುಖಂಡರ ಶೀಥಲ ಕಾನೂನು ಹೋರಾಟಕ್ಕೆ ತೆರೆಬಿದ್ದಂತಾಗಿದೆ. ಇನ್ನೆರಡು ವಾರದಲ್ಲಿ ನಗರಸಭೆ ನೂತನ ಆಡಳಿತ ಮಂಡಳಿ ರಚನೆಯಾಗಬೇಕಿದೆ.

Advertisement

ಬಂತು ಭಾಗ್ಯ: ಮೇಲ್ದರ್ಜೆಗೇರಿದ ನಗರಸಭೆ ಪ್ರಹಸನ ಒಂದೆಡೆ ಗ್ರಾಪಂ ವ್ಯಾಪ್ತಿಯ ಮುಖಂಡರು ನಗರಸಭೆ ಸದಸ್ಯರಾಗಲು ಹಾತೊರೆಯುತ್ತಿದ್ದರೆ ಮತ್ತೂಂದೆಡೆ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಸದಸ್ಯರು ಅಧಿಕಾರದ ಗದ್ದುಗೆಗೇರಲು ಹಾತೊರೆಯುತ್ತಿದ್ದು ತಮ್ಮ ತಮ್ಮ ನಿಲುವು ಮತ್ತು ಅಭಿಪ್ರಾಯಗಳನ್ನು ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಅಂತಿಮವಾಗಿ ಪುರಸಭೆಗೆ ಆಯ್ಕೆಯಾಗಿದ್ದ ಸದಸ್ಯರಿಗೆ ಪ್ರಜಾಪ್ರಭುತ್ವದಡಿ ಕಾನೂನು ಬಲಬಂದಿದೆ. ಅಂತೂ ಬಯಸಿದ ಭಾಗ್ಯ ತಡವಾಗಿಯಾದರೂ ಬಂದಂತಾಗಿದ್ದು ಪುರಸಭೆ ಸದಸ್ಯರಾಗಿ ಅಧಿಕಾರದ ಗದ್ದುಗೆ ಏರಲಿದ್ದಾರೆ.

ಪಕ್ಷಾತೀತ ಹೋರಾಟ: ಪುರಸಭೆ ಚುನಾವಣೆ 23 ವಾರ್ಡ್‌ಗಳಲ್ಲಿ ಜೆಡಿಎಸ್‌14, ಕಾಂಗ್ರೆಸ್‌ 06, ಬಿಜೆಪಿ 02 ಮತ್ತು ಪಕ್ಷೇತರ 01 ಸದಸ್ಯರು ಪಕ್ಷಾತೀತವಾಗಿ ತಂಡ ಕಟ್ಟಿಕೊಂಡು ಕಾನೂನು ಹೋರಾಟ ಮಾಡಿದ್ದ ರಿಂದ ಗ್ರಾಮೀಣ ಮುಖಂಡರಿಗೆ ಹಿನ್ನಡೆಯಾಗಿದೆ.

ಪ್ರತಿಭಟಿಸಿದ್ದ ಸದಸ್ಯರು: ಜೆಡಿಎಸ್‌ ಭದ್ರಕೋಟೆ ಯಾಗಿದ್ದ ತಾಲೂಕಿನಲ್ಲಿ ಪುರಸಭೆ ಚುನಾವಣೆಯಲ್ಲಿ ಪಕ್ಷದ 14ಮಂದಿ ಸದಸ್ಯರು ಗೆಲುವು ಸಾಧಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಶಾಸಕ ಡಾ.ಕ ಶ್ರೀನಿವಾಸ್‌ಮೂರ್ತಿ ಪತ್ರ ವ್ಯವಹಾರಗಳನ್ನರಿತು ಸ್ವಪಕ್ಷೀಯರು ಅನ್ಯಪಕ್ಷದ ಸದಸ್ಯರನ್ನು ಸೇರಿಸಿಕೊಂಡು ಜೆಡಿಎಸ್‌ ತಾಲೂಕು ಅಧ್ಯಕ್ಷ ಎನ್‌.ಪಿ.ಹೇಮಂತ್‌ ಕುಮಾರ್‌ ನೇತೃತ್ವದಲ್ಲಿ ಸ್ವಪಕ್ಷದ ಶಾಸಕರ ವಿರುದ್ಧವೇ ತೊಡೆತಟ್ಟಿ ಪ್ರತಿಭಟಿಸಿದ್ದರು. ಅಲ್ಲದೇ, ಶಾಸಕರ ನಡೆ ಖಂಡಿಸಿದ್ದು ಧಿಕ್ಕಾರ ಕೂಗಿದ್ದು ಗುಟ್ಟಾಗಿ ಉಳಿದಿಲ್ಲ.

ಇದನ್ನೂ ಓದಿ:- 501 ಸಾಮೂಹಿಕ ಮದುವೆ ಕಾರ್ಯಕ್ರಮ: ವಿರೂಪಾಕ್ಷ

Advertisement

“ಪುರಸಭೆ ಸದಸ್ಯರ ನ್ಯಾಯಯುತ ಹೋರಾಟಕ್ಕೆ ಸುಪ್ರೀಂನಿಂದ ಗೆಲುವು ಸಾಧಿಸಲಾಗಿದೆ. ಈ ಮೂಲಕ ಜನಾಭಿಪ್ರಾಯವನ್ನು ನ್ಯಾಯಾಂಗ ಎತ್ತಿಹಿಡಿದಿರುವುದು ಸಂತಸ ತಂದಿದೆ.” – ಎ.ಪಿಳ್ಳಪ್ಪ, ಪುರಸಭೆ ಮಾಜಿ ಅಧ್ಯಕ.

ಶಾಸಕರು ಅನ್ಯಾಯ ಮಾಡಿದರು…

ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ 14ಸ್ಥಾನ ಗೆದ್ದು ಬಹುಮತ ಗಳಿಸಿದ್ದರೂ ನಮ್ಮ ಶಾಸಕರು ನ್ಯಾಯ ನೀಡುವ ಬದಲಿಗೆ ಅನ್ಯಾಯಮಾಡಲು ನಮ್ಮ ಪರ ನಿಲ್ಲಲಿಲ್ಲ. ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಅಸಹಕಾರದ ನಡುವೆಯೂ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಹೋರಾಡಿದ ಹಿನ್ನೆಲೆ ಕಾನೂನು ಜಯ ದೊರೆತಿದೆ. ಪುರಸಭೆ ಸದಸ್ಯರ ಕಾನೂನು ಹೋರಾಟಕ್ಕೆ ಬಿಜೆಪಿ ಮಾಜಿ ಶಾಸಕ ಎಂ.ವಿ.ನಾಗರಾಜ್‌ ನೀಡಿದ ಸಹಕಾರ ಸ್ಮರಣೀಯ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಎನ್‌ .ಪಿ.ಹೇಮಂತ್‌ಕುಮಾರ್‌ ತಿಳಿಸಿದ್ದಾರೆ.

  • – ಕೊಟ್ರೇಶ್‌ ಆರ್‌.
Advertisement

Udayavani is now on Telegram. Click here to join our channel and stay updated with the latest news.

Next