Advertisement

ಕೋರೆಗಾಂವ್‌ ಗೆಲುವಿನ ನೆನಪಿಗೆ ವಿಜಯೋತ್ಸವ

08:26 AM Jan 02, 2019 | |

ದಾವಣಗೆರೆ: ಮಹಾರಾಷ್ಟ್ರದ ಪುಣೆಯ ಶಿರೂರು ತಾಲೂಕಿನ ಕೋರೆಗಾಂವ್‌ನಲ್ಲಿ 1818ರ ಜ. 1ರಂದು ನಡೆದ ಯುದ್ಧದಲ್ಲಿ ಸಾಧಿಸಿದ ಗೆಲುವಿನ ಸವಿನೆನಪಿಗಾಗಿ ಮಂಗಳವಾರ ಬಹುಜನ ಸಮಾಜ ಪಾರ್ಟಿ ಮತ್ತು ಸಾಮಾಜಿಕ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು. ಅಂಬೇಡ್ಕರ್‌ ವೃತ್ತದಲ್ಲಿನ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಘೋಷಣೆ ಕೂಗಿ, ಪರಸ್ಪರ ಸಿಹಿ ಹಂಚುವ ಮುಖೇನ ಕೋರೆಗಾಂವ್‌ ವಿಜಯೋತ್ಸವ ಆಚರಿಸಿದರು.

Advertisement

ಬಹುಜನ ಸಮಾಜ ಪಾರ್ಟಿ: ಪೇಶ್ವೆಗಳ ಎರಡನೇ ಬಾಜಿರಾಯನ ಆಡಳಿತದಲ್ಲಿ ವೈದಿಕ ಮನುಧರ್ಮಶಾಸ್ತ್ರ ಆಧಾರಿತ ಚಾತುರ್ವರ್ಣ ಜಾತಿ ಪದ್ಧತಿ ಅನುಸರಿಸುತ್ತಾ ಅಸ್ಪೃಶ್ಯರನ್ನು ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಬಾಂಬೆ ನೇಟಿವ್‌ ಇನ್‌ಫಂಟ್ರಿಯಾ 2ನೇ ಬೆಟಾಲಿಯನ್‌ನ ಮೊದಲ ರೆಜಿಮೆಂಟ್‌ನಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಿದ್ದವರು ಜಾತಿ ಪದ್ಧತಿ ಅನುಸರಣೆ ತೀವ್ರವಾಗಿ ವಿರೋಧಿಸುತ್ತಿದ್ದರು. ಅದೇ ಸಂದರ್ಭಲ್ಲಿ ಬ್ರಿಟಿಷರು ಪೇಶ್ವೆಗಳ ವಿರುದ್ಧ ನಡೆಸಿದ ಯುದ್ಧದಲ್ಲಿ ಪಾಲ್ಗೊಂಡಿದ್ದ ಮಹರ್‌ ಭಂಗಿ, ಚಮ್ಮಾರ್‌ ಇತರೆ ಸಮುದಾಯದವರು 1818ರ ಜ. 1ರಂದು ಭೀಮಾ ನದಿ ತೀರದಲ್ಲಿ ನಡೆದ ಯುದ್ಧದಲ್ಲಿ ವಿರೋಚಿತ ಹೋರಾಟ ನಡೆಸಿ, 21 ಜನರು ಹುತಾತ್ಮರಾದರು ಎಂದು ಕಾರ್ಯಕರ್ತರು ಸ್ಮರಿಸಿದರು.

ಬಾಬಾ ಸಾಹೇಬ್‌ ಅಂಬೇಡ್ಕರ್‌ರವರು ಪ್ರತಿ ವರ್ಷವೂ ಕೋರೆಗಾಂವ್‌ನಲ್ಲಿನ ಹುತಾತ್ಮರ ವಿಜಯಸ್ಮಾರಕಕ್ಕೆ ಭೇಟಿ ನೀಡಿ, ವೀರ ಯೋಧರಿಗೆ ಗೌರವ ಸಲ್ಲಿಸುತ್ತಿದ್ದರು. ಆ ಹಿನ್ನೆಲೆಯಲ್ಲಿ ಅಂಬೇಡ್ಕರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚುವ ಮೂಲಕ ಕೋರೆಂಗಾವ್‌ ವಿಜಯೋತ್ಸವ ಆಚರಿಸಲಾಗುವುದು ಎಂದು ತಿಳಿಸಿದರು. ಬಹುಜನ ಸಮಾಜ ಪಾರ್ಟಿ ಜಿಲ್ಲಾ ಅಧ್ಯಕ್ಷ ಎಚ್‌. ಮಲ್ಲೇಶ್‌, ಪರಶುರಾಮ ಕೋಟೆಮಲ್ಲೂರು, ಮಂಜುನಾಥ್‌ ಪೆರಿಯಾರ್‌, ಮೋಹನ್‌ದಾಸ್‌, ಎಚ್‌. ಪ್ರವೀಣ್‌, ಮಂಜಪ್ಪ ಕೋಡಿಹಳ್ಳಿ, ಬಿ.ವಿ. ಹನುಮಂತಪ್ಪ, ಮಲ್ಲಪ್ಪ, ಅಂಜಿನಪ್ಪ ನೀಲಗುಂದ ಇತರರು ಇದ್ದರು.

ಸಾಮಾಜಿಕ ಸಂಘರ್ಷ ಸಮಿತಿ…
ಸಾಮಾಜಿಕ ಸಂಘರ್ಷ ಸಮಿತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿದ್ಯಾರ್ಥಿಗಳ ಒಕ್ಕೂಟ ಕಾರ್ಯಕರ್ತರು ಕೋರೆಗಾಂವ್‌ ವಿಜಯೋತ್ಸವ ಆಚರಿಸಿದರು. ಅಪಮಾನ, ಅವಮಾನಕ್ಕೀಡಾಗಿದ್ದ ದಲಿತರು, ಶೋಷಿತರು ತಮಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ 1818 ರ ಜ. 1 ರಂದು ಕೋರೆಂಗಾವ್‌ನಲ್ಲಿ ನಡೆದ ಯುದ್ಧದಲ್ಲಿ ಜಯ ಗಳಿಸಿದ್ದರ ಸವಿನೆನಪಿಗಾಗಿ ಕೋರೆಂಗಾವ್‌ ಸಂಗ್ರಾಮದ- ಶೋಷಿತರ ವಿಜಯದ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಸಮಿತಿ ಜಿಲ್ಲಾ ಅಧ್ಯಕ್ಷ ಪಿ. ತಿಪ್ಪೇರುದ್ರಪ್ಪ, ಇಮ್ತಿಯಾಜ್‌ ಹುಸೇನ್‌, ಬಿ.ಎನ್‌. ನಾಗೇಶ್‌, ಡಿ. ಅಂಜಿನಪ್ಪ, ಎಂ. ಪ್ರಕಾಶ್‌, ಚಂದ್ರಪ್ಪ, ಪರಶುರಾಮ್‌ ಹೊನ್ನಾಳಿ, ಗುಮ್ಮನೂರು ಪರಶುರಾಮ್‌, ಮಂಜಪ್ಪ, ಆರ್‌. ಜಯಪ್ಪ, ಡಿ. ಜಯಪ್ಪ, ತಿಪ್ಪೇಶ್‌, ಎಸ್‌.ಎಲ್‌. ದುರುಗೇಶ್‌, ಗಂಗಾಧರ್‌, ಎಂ. ಕಿರಣ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next