Advertisement

ವಿಜಯ ಬ್ಯಾಂಕ್‌ ವಿಲೀನ ಖಂಡಿಸಿ ಕರಾಳ ದಿನಾಚರಣೆ

02:45 AM Apr 02, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದ್ದ ವಿಜಯ ಬ್ಯಾಂಕನ್ನು ಬ್ಯಾಂಕ್‌ ಆಫ್‌ ಬರೋಡಾದ ಜತೆ ವಿಲೀನಗೊಳಿಸಿರುವುದು ಜಿಲ್ಲೆಯ ಜನತೆಗೆ ಕೇಂದ್ರ ಸರಕಾರ ಎಸಗಿದ ಅನ್ಯಾಯ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ವಿಜಯ ಬ್ಯಾಂಕ್‌ ವಿಲೀನ ವಿರೋಧಿಸಿ ಕಾಂಗ್ರೆಸ್‌ ವತಿಯಿಂದ ಮಲ್ಲಿಕಟ್ಟೆಯಲ್ಲಿರುವ ವಿಜಯ ಬ್ಯಾಂಕ್‌ ಶಾಖೆ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಕರಾಳ ದಿನಾಚರಣೆ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ವಿಪರ್ಯಾಸದ ನಡೆ
ನರಸಿಂಹನ್‌ ವರದಿ ನಷ್ಟದಲ್ಲಿರುವ ಬ್ಯಾಂಕನ್ನು ಲಾಭದಲ್ಲಿರುವ ಬ್ಯಾಂಕ್‌ ಜತೆಗೆ ವಿಲೀನಗೊಳಿಸಬೇಕು ಎಂದು ಹೇಳಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಲಾಭದಲ್ಲಿರುವ ವಿಜಯ ಬ್ಯಾಂಕನ್ನು ನಷ್ಟದಲ್ಲಿರುವ ದೇನಾ ಬ್ಯಾಂಕ್‌ ಹಾಗೂ ಬ್ಯಾಂಕ್‌ ಆಫ್‌ ಬರೋಡಾದ ಜತೆಗೆ ವಿಲೀನಗೊಳಿಸುತ್ತಿರುವುದು ವಿಪರ್ಯಾಸವಾಗಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ವಿಜಯ ಬ್ಯಾಂಕ್‌ ಉಳಿಸುವಲ್ಲಿ ಯಾವುದೇ ಪ್ರಯತ್ನ ನಡೆಸದೆ ತನ್ನ ವೈಫಲ್ಯವನ್ನು ಪ್ರದರ್ಶಿಸಿದ್ದಾರೆ ಎಂದರು.

ಮಾಜಿ ಶಾಸಕ ಜೆ.ಆರ್‌. ಲೋಬೋ ಮಾತನಾಡಿ, ವಿಜಯ ಬ್ಯಾಂಕ್‌ ಬ್ಯಾಂಕ್‌ ಆಫ್‌ ಬರೋಡಾದ ಜತೆ ವಿಲೀನಗೊಂಡಿರುವ ಈ ದಿನ ಜಿಲ್ಲೆಯ ಪಾಲಿಗೆ ಕರಾಳ ದಿನವಾಗಿದೆ.ಜಿಲ್ಲೆಯ ಹಿತಾಸಕ್ತಿಯನ್ನು ಬಲಿಗೊಟ್ಟ ಬಿಜೆಪಿಗೆ ಚುನಾವಣೆಯಲ್ಲಿ ಜನತೆ ಸೂಕ್ತ ಪಾಠ ಕಲಿಸಬೇಕು ಎಂದರು.

ವಿಜಯ ಬ್ಯಾಂಕ್‌ ಮಾಜಿ ನಿರ್ದೇಶಕ ಬಿ. ಇಬ್ರಾಹಿಂ ಮಾತನಾಡಿ, ಬ್ಯಾಂಕಿನ ಅಸ್ತಿತ್ವವನ್ನೇ ನಾಶ ಮಾಡಿದ ಕೇಂದ್ರ ಸರಕಾರದ ವಿರುದ್ಧ ಎಲ್ಲರೂ ಪ್ರತಿಭಟಿಸಬೇಕು ಎಂದರು.

Advertisement

ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಮಾತನಾಡಿ, ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಗೆ ಜಿಲ್ಲೆಯ ವಿಜಯ ಬ್ಯಾಂಕ್‌ ಬಲಿಯಾಗಿದೆ. ಲೋಕಸಭೆಗೆ ತಾನು ಪಾದಾರ್ಪಣೆ ಮಾಡಿದರೆ ವಿಜಯ ಬ್ಯಾಂಕಿನ ಹೆಸರನ್ನು ಮತ್ತೂಮ್ಮೆ ಸ್ಥಾಪಿಸುತ್ತೇನೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನತೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಮೊದೀನ್‌ ಬಾವಾ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಮಹಾಬಲ ಮಾರ್ಲ, ರಾಧಾಕೃಷ್ಣ, ವಿನಯರಾಜ್‌, ಮುಖಂಡರಾದ ಸಂತೋಷ್‌ ಶೆಟ್ಟಿ, ರಮಾನಂದ ಪೂಜಾರಿ, ನೀರಜ್‌ ಪಾಲ್‌, ನಜೀರ್‌ ಬಜಾಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next