Advertisement

ರೈಲಿನಿಂದ ಶಿಕ್ಷಕಿಯನ್ನು ಕೆಳಗೆ ತಳ್ಳಿದ ದುಷ್ಕರ್ಮಿಗಳು!

09:53 AM Dec 10, 2019 | Sriram |

ಬೆಂಗಳೂರು: ಮುಂಜಾನೆ ನಿದ್ರೆಯಲ್ಲಿದ್ದ ಮಹಿಳೆಯೊಬ್ಬರ ಬಳಿ ಹಣವಿದ್ದ ಬ್ಯಾಗ್‌ ಕಸಿಯಲು ಯತ್ನಿಸಿದ ದುಷ್ಕರ್ಮಿಗಳಿಬ್ಬರು, ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದಲೇ ತಳ್ಳಿ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆ.ಆರ್‌. ಪುರ ರೈಲು ನಿಲ್ದಾಣ ಸಮೀಪ ನಡೆದಿದೆ.

Advertisement

ಡಿ. 5ರ ಮುಂಜಾನೆ ಈ ಘಟನೆ ನಡೆದಿದೆ. ರೈಲು ಹಳಿಗಳ ಮೇಲೆ ಬಿದ್ದ ಪರಿಣಾಮ ಗಾಯಗೊಂಡಿದ್ದ ಚೆನ್ನೈಮೂಲದ ಶಿಕ್ಷಕಿ ಎವ್ವಿ ಚೊಕ್ಕಲಿಂಗಂ (45) ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಎವ್ವಿ ಚಿಕ್ಕಲಿಂಗಂ ಅವರ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವ ದಂಡು ರೈಲ್ವೇ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಗಾಯಾಳು ಎವ್ವಿ ಚೊಕ್ಕಲಿಂಗಂ ಅವರ ಪತಿ ಮದ್ರಾಸ್‌ ಐಐಟಿಯಲ್ಲಿ ಪ್ರೊಫೆಸರ್‌ ಆಗಿದ್ದು ಎವ್ವಿ ಅವರು ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಾರೆ.ಬೆಂಗಳೂರಿನಲ್ಲಿಯೇ ವಿಧ್ಯಾಭ್ಯಾಸ ಮಾಡಿರುವ ಎವ್ವಿ ಅವರು ತಮ್ಮ ಶಾಲಾ ಗೆಳತಿಯಾದ ಡಾ. ಚಂದ್ರಪ್ರಭಾ ಹಾಗೂ ಮತ್ತಿತರ ಸ್ನೇಹಿತೆಯರನ್ನು ಭೇಟಿಯಾಗಲು ಡಿ.5ರಂದು ಚೆನೈನಿಂದ ರೈಲಿನಲ್ಲಿ ಆಗಮಿಸುತ್ತಿದ್ದರು. ರೈಲು ಬಾಗಿಲಿನ ಪಕ್ಕದ ಸೀಟಿನಲ್ಲಿಯೇ ಅವರು ಆಸೀನರಾಗಿದ್ದು ಮುಂಜಾನೆ ತಮ್ಮ ವ್ಯಾನಿಟಿ ಬ್ಯಾಗ್‌ ಅನ್ನು ತಲೆಯ ಬಳಿಯಿಟ್ಟುಕೊಂಡು ನಿದ್ರೆಗೆ ಜಾರಿದ್ದರು. ಅಕ್ಕ-ಪಕ್ಕದ ಸೀಟುಗಳಲ್ಲಿಯೂ ಇತರೆ ಪ್ರಯಾಣಿಕರಿರಲಿಲ್ಲ.

ಮುಂಜಾನೆ ಮೂರು ಗಂಟೆ ಸುಮಾರಿಗೆ ರೈಲು ಕೆ.ಆರ್‌ ಪುರ ನಿಲ್ದಾಣ ಬಿಟ್ಟು ಸ್ವಲ್ಪ ದೂರವಷ್ಟೇ ಬಂದಿತ್ತು. ಈ ವೇಳೆ ಇಬ್ಬರು ದುಷ್ಕರ್ಮಿಗಳು ಆಕೆಯ ಬಳಿಯಿದ್ದ ಬ್ಯಾಗ್‌ ಕಸಿಯಲು ಯತ್ನಿಸಿದ್ದಾರೆ. ಕೂಡಲೇ ನಿದ್ರೆಯಿಂದ ಎಚ್ಚರಗೊಂಡ ಅವರು ಬ್ಯಾಗ್‌ ಬಿಡದೇ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೂ ದುಷ್ಕರ್ಮಿಗಳು ಬ್ಯಾಗ್‌ ಎಳೆದಾಡಿದ ಪರಿಣಾಮ ಎವ್ವಿ ಅವರು ಪ್ರತಿರೋಧ ತೋರಿದ್ದು, ತಳ್ಳಾಟದಲ್ಲಿ ಅವರು ಬಾಗಿಲ ಹತ್ತಿರ ಬಂದಿದ್ದಾರೆ. ದುಷ್ಕರ್ಮಿಗಳು ಆಕೆಯಿಂದ ಬ್ಯಾಗ್‌ ಕಿತ್ತುಕೊಂಡು ರೈಲಿನಿಂದ ಆಕೆಯನ್ನು ಕೆಳಗೆ ತಳ್ಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಿಸಿದ ಆಟೋಚಾಲಕ!
ಚಲಿಸುತ್ತಿದ್ದ ರೈಲಿನಿಂದ ರಭಸದಿಂದ ಹಳಿಗಳ ಮೇಲೆ ಬಿದ್ದಿದ್ದರಿಂದ ಎವ್ವಿ ಅವರ ತಲೆಗೆ ಪೆಟ್ಟಾಗಿದ್ದು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಹುತೇಕ ಅರ್ಧ ಗಂಟೆಗೂ ಹೆಚ್ಚು ಕಾಲದ ಬಳಿಕ ಅವರಿಗೆ ಎಚ್ಚರಿಕೆಯಾಗಿದ್ದು, ಆ ಕತ್ತಲಲ್ಲಿಯೂ ಅರ್ಧ ಕಿ.ಮೀಗೂ ದೂರವಿದ್ದ ರೈಲು ನಿಲ್ದಾಣಕ್ಕೆ ನಡೆದುಕೊಂಡು ಬಂದಿದ್ದಾರೆ. ಆಕೆಯನ್ನು ಗಮನಿಸಿದ ಆಟೋ ಚಾಲಕರೊಬ್ಬರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಕೆಯ ಸ್ನೇಹಿತೆ ಡಾ. ಚಂದ್ರಪ್ರಭಾ ಅವರು ಆಗಮಿಸಿ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ, ಗಾಯಳು ಎವ್ವಿ ಅವರ ಆರೋಗ್ಯ ಚೇತರಿಕೆ ಕಂಡು ಬಂದಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಹೇಳಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿರುವ ಬ್ಯಾಗ್‌ನಲ್ಲಿ ಹದಿನಾಲ್ಕು ಸಾವಿರ ರೂ. ನಗದು, ಒಂದು ಸ್ಮಾರ್ಟ್‌ ಫೋನ್‌, ಪಾನ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ಗಳು ಇದ್ದವು ಎಂದು ಎವ್ವಿ ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಸೈನಿಕನನ್ನೂ ಬಿಟ್ಟಿರಲಿಲ್ಲ… ದುಷ್ಕರ್ಮಿಗಳು!
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರನ್ನು ಕೆಳಗೆ ನೂಕಿ ದರೋಡೆ ಮಾಡಿದ ಮೂರನೇ ಪ್ರಕರಣ ಇದಾಗಿದೆ. ಆಗಸ್ಟ್‌ನಲ್ಲಿ ಭಾರತೀಯ ಸೇನೆ ಯೋಧ ಮಾದೇಗೌಡ ಎಂಬುವವರನ್ನು ಕೂಡ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ನೂಕಿದ್ದ ದುಷ್ಕರ್ಮಿಗಳು ಮೊಬೈಲ್‌ ಕಿತ್ತುಕೊಂಡಿದ್ದರು. ಕುಟುಂಬದ ಜತೆ ಮಂಡ್ಯಕ್ಕೆ ಪ್ರಯಾಣಿಸುತ್ತಿದ್ದ ಮಾದೇಗೌಡ, ಶೌಚಾಲಯಕ್ಕೆ ತೆರಳಿದ್ದ ವೇಳೆ ಅವರನ್ನು ಹಿಂಭಾಲಿಸಿದ್ದ ದುಷ್ಕರ್ಮಿಗಳು ಮೊಬೈಲ್‌ಗಾಗಿ ಈ ಕೃತ್ಯ ಎಸಗಿದ್ದರು.ರೈಲ್ವೇ ಹಳಿ ಮೇಲೆ ಬಿದ್ದು ಕೋಮಾ ಸ್ಥಿತಿ ತಲುಪಿದ್ದ ಮಾದೇಗೌಡ ಅವರು ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು.

ಇದಾದ ಬಳಿಕ ಸೆಪ್ಪೆಂಬರ್‌ 21ರಂದು ಕೆಂಗೇರಿ ಸಮೀಪ ಎಂಜಿನಿಯರಿಂಗ್‌ ವಿದ್ಯಾರ್ಥಿ ಸುಮಂತ್‌ ಕುಮಾರ್‌ ಎಂಬಾತನ ಬಳಿ ಮೊಬೈಲ್‌ ಕಿತ್ತುಕೊಂಡು ಅವರನ್ನು ಕೆಳಗೆ ನೂಕಿದ್ದರು. ಇದರಿಂದ ಸುಮಂತ್‌ ಕುಮಾರ್‌ ಅವರ ಎರಡೂ ಪಕ್ಕೆಲುಬು ಮುರಿದಿತ್ತು.

ಪೊಲೀಸರು ಹೇಳುವುದು ಏನು?
ಚಲಿಸುತ್ತಿದ್ದ ರೈಲುಗಳಲ್ಲಿ ಅಪರಾಧ ಕಡಿವಾಣಕ್ಕೆ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಹ ಎಚ್ಚರಿಕೆಯಿಂದ ಇರಬೇಕು, ಬಾಗಿಲುಗಳ ಬಳಿ ನಿಲ್ಲಬಾರದು ಎಂದು ಸೂಚನೆಗಳು ನೀಡುತ್ತಿರುತ್ತೇವೆ. ಗಸ್ತು ಕಾರ್ಯ ಕೂಡ ಮಾಡುಲಾಗುತ್ತದೆ. ಪ್ರಯಾಣಿಕರು ಸಹ ದುಷ್ಕರ್ಮಿಗಳ ಬಗ್ಗೆ ಅನುಮಾನ ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಹಿರಿಯ ಅಧಿಕಾರಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next