ಬಾಗಲಕೋಟೆ: ಕಳೆದ ಐದು ದಶಕಗಳಿಂದ ಕುಂಟುತ್ತ ಸಾಗಿರುವ ಯುಕೆಪಿ ಯೋಜನೆಗೆ ವೇಗ ನೀಡಿ, ಸಂತ್ರಸ್ತರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಭೂಮಿಗೆ ಯೋಗ್ಯ ಬೆಲೆ ನೀಡಲು ಮಾರುಕಟ್ಟೆ ಬೆಲೆ ನಿರ್ಧರಣಾ ಸಮಿತಿ ರಚಿಸುವಂತೆ ಒತ್ತಾಯಿಸಿ ಅವಳಿ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆಯ ಬಾಧಿತ ಸಂತ್ರಸ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ವಿಜಯಪುರ, ಬಾಗಲಕೋಟೆ ಅವಳಿಜಿಲ್ಲೆಗಳಿಂದ ಆಗಮಿಸಿದ್ದ ಸಂತ್ರಸ್ತರು, ಸರ್ಕಾರದ ವಿಳಂಬ ನೀತಿ ಹಾಗೂ ಭೂ ಪರಿಹಾರಕ್ಕೆ ಯೋಗ್ಯ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಅಂತರಗೊಂಡ, ಕಿರಣ ಬಾಳಾಗೋಳ ಮುಂತಾದವರು ಮಾತನಾಡಿ, ಯುಕೆಪಿ 3ನೇ ಹಂತದಲ್ಲಿ ಸ್ವಾಧೀನಗೊಳ್ಳಲಿರುವ ಭೂಮಿಗೆ ಯೋಗ್ಯ ಪರಿಹಾರ ನೀಡಲು ಮಾರುಕಟ್ಟೆ ಬೆಲೆ ನಿರ್ಧರಣಾ ಸಮಿತಿ ರಚಿಸುವುದಾಗಿ ಚುನಾವಣೆಗೆ ಮುನ್ನ ಸ್ವತಃ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರು ಹೇಳಿದ್ದರು. ಆದರೆ, ಈಗ ಕಾನೂನು ಪ್ರಕಾರ ಪರಿಹಾರ ನೀಡುವುದಾಗಿ ಹೇಳುತ್ತಿದ್ದು, ಇದರಿಂದ ಸಂತ್ರಸ್ತರಿಗೆ ಅನ್ಯಾವಾಗಲಿದೆ ಎಂದರು.
ಭೂಮಿ ಕಳೆದುಕೊಳ್ಳುವ ರೈತರನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಯೋಜನೆಯ ಪುನರ್ ವಸತಿ ಕೇಂದ್ರ, ಕಾಲುವೆ ನಿರ್ಮಾಣ, ಹಿನ್ನೀರ ವ್ಯಾಪ್ತಿಯಡಿ 1.24 ಲಕ್ಷ ಎಕರೆ ಭೂಮಿ ಕಳೆದುಕೊಳ್ಳಲಿದ್ದು, ಇದಕ್ಕೆ ಯೋಗ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರುಕಟ್ಟೆ ಬೆಲೆ ನೀಡಬೇಕು. ಭೂಮಿ ಹಿಡಿದು, ಉತ್ಪನ್ನ ಬರುವವರೆಗೆ ನಿರ್ವಾತ ಅವಧಿಯಲ್ಲಿ ಸಂತ್ರಸ್ತರು ಬದಕು ನಡೆಸಲು ತಗಲುವ ವೆಚ್ಚ ಹಾಗೂ ಪರಿಹಾರ ಹಣದಲ್ಲಿ ಜಮೀನಿನ ಮೇಲಿರುವ ಕೃಷಿ ಸಾಲ, ಆಸ್ತಿ ಭದ್ರತೆ ಸಾಲಗಳು, ಬೆಳೆ ಸಾಲದ ಹಣ ಕಡಿತ ಮಾಡುತ್ತಿದ್ದು, ಇದರಿಂದ ಸಂತ್ರಸ್ತರ ಬದುಕು ಬೀದಿಪಾಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭೂಮಿಗೆ ಯೋಗ್ಯ ಪರಿಹಾರ ನೀಡದೇ ಇದ್ದರೆ, ಯೋಜನೆಗಾಗಿ ತ್ಯಾಗ ಮಾಡಿದವರನ್ನು ಬೀದಿಗೆ ತಳ್ಳಿದಂತಾಗುತ್ತದೆ ಎಂದರು.
ಖುಷ್ಕಿ ಜಮೀನಿಗೆ 20 ಲಕ್ಷ, ನೀರಾವರಿ ಜಮೀನಿಗೆ 30 ಲಕ್ಷದ ವರೆಗೆ ಬೆಲೆ ಇದೆ. ಆದರೆ, ನೊಂದಣಿ ಕಚೇರಿಯಲ್ಲಿನ ಯೋಜನಾ ಪ್ರದೇಶದಲ್ಲಿ ಸರ್ಕಾರದ ಮಾರ್ಗಸೂಚಿ ಬೆಲೆಗಳು 1ರಿಂದ 6 ಲಕ್ಷದವರೆಗೆ ಇದೆ. ಗರಿಷ್ಠ ಮಾರ್ಗಸೂಚಿ ಬೆಲೆಗಳನ್ನು ಪರಿಗಣಿಸಿ ಸಾಮಾನ್ಯ ಐತಿರ್ಪಿನನ್ವಯ ಪರಿಹಾರ ನೀಡಿದರೂ ಸಹ, ಮರಳಿ ಭೂಮಿ ಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಾರುಕಟ್ಟೆ ಬೆಲೆ ನಿರ್ಧಾರಣ ಸಮಿತಿ ರಚಿಸಿ ಸರ್ವ ಸಮ್ಮತ ಯೋಗ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಪುನರ್ ವಸತಿ ಕೇಂದ್ರಗಳ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಸಂಸದರ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮ ಪ್ರತಿನಿಧಿಗಳ ಒಳಗೊಂಡಂತೆ ಸಮಿತಿ ರಚಿಸಿ, ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಡುವ ವ್ಯವಸ್ಥೆಯಾಗಬೇಕು ಎಂದು ಆಗ್ರಹಿಸಿದರು.