Advertisement
ವಿಶ್ವವಿಖ್ಯಾತ ಮೈಸೂರು ದಸರಾ ಮರವಣಿಗೆಯಲ್ಲಿ ಜಂಬೂ ಸವಾರಿ ಬಿಟ್ಟರೆ ರೂಪಕಗಳು ಅತಿ ಹೆಚ್ಚು ಆಕರ್ಷಣೀಯವಾಗಿರುತ್ತವೆ. ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳು ಆಯಾ ಜಿಲ್ಲೆಗಳ ವಿಶೇಷತೆ ಹೊಂದಿರುತ್ತವೆ. ಪ್ರತಿ ವರ್ಷ ಒಂದಿಲ್ಲೊಂದು ವಿಶೇಷತೆಯುಳ್ಳ ಸ್ತಬ್ಧ ಚಿತ್ರಗಳು ದಸರಾ ಉತ್ಸವದಲ್ಲಿ ಗಮನ ಸೆಳೆಯುತ್ತವೆ. ಅದೇ ರೀತಿ ಈ ಸಲವೂ ವಿವಿಧ ವಿಭಿನ್ನ ಶೈಲಿಯ ರೂಪಕಗಳನ್ನು ಕಳುಹಿಸುವಂತೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಪ್ರವಾಹದ ಸ್ಥಿತಿಗತಿ ಹಾಗೂ ಅದರಿಂದ ನಲುಗಿದ ಜನರ ಅಳಲು ಬಿಂಬಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.
Related Articles
Advertisement
ಪ್ರತಿ ವರ್ಷ ಖಾನಾಪುರದ ಕಲಾವಿದ ವಿನೋದ ಗಸ್ತಿ ಅವರೇ ಸ್ತಬ್ಧ ಚಿತ್ರಗಳನ್ನು ತಯಾರಿಸುತ್ತಾರೆ. ಈ ಸಲವೂ ಮೈಸೂರು ದಸರಾ ಉತ್ಸವದ ಸ್ತಬ್ಧ ಚಿತ್ರ ಇವರ ಕೈಚಳಕದಲ್ಲಿಯೇ ಮೂಡಿ ಬರಲಿದೆ. ಇದರ ಸಂಪೂರ್ಣ ಮೇಲ್ವಿಚಾರಣೆ ನೋಡಲ್ ಅಧಿಕಾರಿ ಗೋಟೂರ ಅವರೇ ನಿರ್ವಹಿಸಲಿದ್ದಾರೆ.
ಮೈಸೂರು ದಸರಾ ಉತ್ಸವದ ಸ್ತಬ್ಧ ಚಿತ್ರಗಳ ಆಯ್ಕೆ ಸಮಿತಿ ನೀಡಿದ ಬದಲಾವಣೆ ಮಾಡಿಕೊಂಡು ಪ್ರಸ್ತಾವ ಕಳುಹಿಸಲು ಜಿಲ್ಲಾಡಳಿತ ಒಂದು ದಿನ ಕಾಲಾವಕಾಶ ಕೇಳಿದೆ. ಅದಕ್ಕೆ ಸಂಬಂಧಿಸಿದಂತೆ ನೀಲನಕ್ಷೆ ಪೂರ್ತಿಗೊಳಿಸಿ ಆಯ್ಕೆ ಸಮಿತಿಗೆ ನೀಡಲಿದೆ. ಅದನ್ನು ಮೈಸೂರು ಜಿಲ್ಲೆಯ ಸಚಿವರ ಗಮನಕ್ಕೆ ತಂದು ಅಂತಿಮಗೊಳಿಸುವ ಸಾಧ್ಯತೆ ಇದೆ. ಬಹುತೇಕ ಇದೇ ಟ್ಯಾಬ್ಲೋ ಅಂತಿಮಗೊಳಿಸಲು ಜಿಪಂ ಸಿಇಒ ಹಾಗೂ ನೋಡಲ್ ಅಧಿಕಾರಿ ಪ್ರಯತ್ನಿಸುತ್ತಿದ್ದಾರೆ.
ಜಿಲ್ಲಾ ಪಂಚಾಯತ್‌ದಿಂದ ಒಟ್ಟು ಮೂರು ವಿಷಯಗಳನ್ನು ಆಯ್ಕೆ ಸಮಿತಿಗೆ ನೀಡಲಾಗಿತ್ತು. ಪ್ರವಾಹದ ಸ್ಥಿತಿಗತಿ-ಸಂತ್ರಸ್ತರ ಅಳಲು, ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಹಿತಿ ಹಾಗೂ ಶ್ರೀ ಸವದತ್ತಿ ಯಲ್ಲಮ್ಮ, ಶ್ರೀ ಸೊಗಲ ಸೋಮೇಶ್ವರ ದೇವಸ್ಥಾನಗಳ ಚಿತ್ರಣ ಕುರಿತು ವಿಷಯ ಮಂಡಿಸಲಾಗಿತ್ತು. ಇದರಲ್ಲಿ ಪ್ರವಾಹ ವಿಷಯಕ್ಕೆ ಆದ್ಯತೆ ನೀಡಲಾಗಿತ್ತು. ಅದರಂತೆ ಪ್ರವಾಹದ ಸ್ತಬ್ಧ ಚಿತ್ರವೇ ಈ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಕಂಗೊಳಿಸಲಿದೆ ಎನ್ನುತ್ತಿವೆ ಮೂಲಗಳು.
•ಭೈರೋಬಾ ಕಾಂಬಳೆ