ಬೆಳ್ತಂಗಡಿ: ಕುಕ್ಕಾವು ಅಗರಿಮಾರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಮಕ್ಕಿ, ದೈಪಿತ್ತಿಲು, ಪರ್ಲ ಪ್ರದೇಶಗಳ 15 ಕುಟುಂಬಗಳ 57 ಮಂದಿ ಸಂತ್ರಸ್ತರು ಸೋಮವಾರ ತಮ್ಮ ಮನೆಗಳಿಗೆ ತೆರಳಿದ್ದಾರೆ.
ಶಾಸಕ ಹರೀಶ ಪೂಂಜಾ ಸೋಮವಾರ ಅಗರಿಮಾರು ಮನೆಯಲ್ಲಿರುವ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ತುಂಬಿದರು. ಇಲ್ಲಿನ 7 ಕುಟುಂಬಗಳಿಗೆ ತಮ್ಮ ತಮ್ಮ ಮನೆಗಳಲ್ಲಿ ವಾಸಿಸುವುದು ಅಪಾಯಕಾರಿ ಎಂಬ ಭಯವಿದ್ದು, ಅರಣ್ಯ ಇಲಾಖೆ ಘೋಷಿಸಿರುವ ಪರಿಹಾರವನ್ನು ನೀಡಿದರೆ ಅರಣ್ಯದಿಂದ ಹೊರಬರಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದಶಾಸಕರು, ಹೊರಬರಲು ಇಚ್ಛಿಸಿದರೆ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಅರಣ್ಯ ಇಲಾಖೆಯ ಡಿಎಫ್‌ಒ ಮತ್ತು ಜಿಲ್ಲಾಕಾರಿಯೊಂದಿಗೆ ಸದ್ಯದಲ್ಲಿಯೇ ಸಭೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಗ್ರಾ.ಪಂ. ಸದಸ್ಯ ವಿಜಯ ಗೌಡ, ಅಗರಿಮಾರು ಮನೆಯ ಯಾಜಮಾನಿ ಜಲಜಾಕ್ಷಿ, ಸ್ಥಳೀಯ ರಾದ ವಿನಯಚಂದ್ರ ಎಸ್. ಮೊದಲಾದವರು ಇದ್ದರು.
ಹತ್ತು ದಿನಗಳಿಂದ ಒಂದೇ ಕುಟುಂಬದಂತೆ ಜತೆಗಿದ್ದೆವು. ಸೋಮವಾರ ಎಲ್ಲರೂ ಅವರವರ ಮನೆಗಳಿಗೆ ತೆರಳಿದ್ದಾರೆ. ಮಕ್ಕಿ ಪ್ರದೇಶದ 103 ವರ್ಷದ ಅಜ್ಜಿ ಸೀತಮ್ಮ ಒಬ್ಬರು ಉಳಿದುಕೊಂಡಿದ್ದಾರೆ. ರಸ್ತೆ ಅನುಕೂಲ ನಿರ್ಧರಿಸಿ ಬಳಿಕ ಮನೆಗೆ ಹಿಂದಿರುಗಲಿದ್ದಾರೆ.
-ಜಲಜಾಕ್ಷಿ , ಅಗರಿಮಾರು ಮನೆ ಯಜಮಾನಿ