Advertisement
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜನ ಜಾಗೃತಿ ವೇದಿಕೆ, ಬರ ಮುಕ್ತ ಕರ್ನಾಟಕ ಆಂದೋಲನ, ಜನಾಂದೋಲನ ಮಹಾಮೈತ್ರಿ, ಸ್ವರಾಜ್ ಇಂಡಿಯಾ ಪಕ್ಷ ಹೀಗೆ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಈ ಎಚ್ಚರಿಕೆ ನೀಡಲಾಯಿತು.
Related Articles
Advertisement
ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನದಲ್ಲಿ ಕೊಪ್ಪಳ, ಗದಗ, ರಾಯಚೂರು, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸಂತ್ರಸ್ತರು ಪಾಲ್ಗೊಂಡಿದ್ದರು.
ರೈತ ಚಳವಳಿ ಗಟ್ಟಿ ಮಾಡ್ತೀವಿ: ನೆರೆ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕೊಡುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಇಡೀ ರಾಜ್ಯ ಹೊತ್ತಿ ಉರಿಯಲಿದೆ. 1980ರ ರೈತ ಚಳವಳಿಯಂತೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಜಿಪಂ ಉಪಾಧ್ಯಕ್ಷರೂ ಆಗಿರುವ ರೈತ ಮುಖಂಡ ಮುತ್ತಪ್ಪ ಕೋಮಾರ ಎಚ್ಚರಿಕೆ ನೀಡಿದರು.
ನೆರೆ ಸಂತ್ರಸ್ತರ ಅಧಿವೇಶನದಲ್ಲಿ ಪ್ರಾಸ್ತಾವಿಕ ಮಾತನಾಡಿದ ಅವರು, ಸಂತ್ರಸ್ತರು 48 ದಿನಗಳಿಂದ ಕಣ್ಣೀರಿನಲ್ಲಿದ್ದಾರೆ. ಅವರಿಗೆ ಸ್ಪಂದಿಸದ ಜನಪ್ರತಿನಿಧಿಗಳೆಲ್ಲ ಜನ ದ್ರೋಹಿಗಳು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಎಂಬ ನೀತಿಗಳು ನಮಗೆ ಬೇಕಿಲ್ಲ. ಹಾನಿಯಾದ ವಾಸ್ತವಾಂಶ ಮೇಲೆ ಪರಿಹಾರ ಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರೇ, ನಮ್ಮ ರಾಜ್ಯದ ಜನ ನೀವು ಪ್ರಧಾನಿಯಾಗಲೆಂದು 25 ಜನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಇಂದು ನಮ್ಮ ಬದುಕು ಕೆಟ್ಟು ಹೋಗಿದೆ. ನೀವು ಬಾಯಿ ಬಿಡುತ್ತಿಲ್ಲ. ಬೆಂಗಳೂರಿಗೆ ಬಂದರೂ, ಸಂತ್ರಸ್ತರ ಸ್ಥಿತಿಗತಿ ಏನೆಂದು ಕೇಳುತ್ತಿಲ್ಲ. ರಾಜ್ಯದ ನೆರೆ-ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಿ. ಒಂದು ಹೆಕ್ಟೇರ್ ಬೆಳೆ ಹಾನಿಗೆ 13500 ನಿಗದಿ ಮಾಡಿದ್ದು, ಈ ಹಣದಲ್ಲಿ ಹಾನಿಯಾದ ಕಬ್ಬು ಕಡಿದು, ಒಡ್ಡಿಗೆ ಹಾಕಲೂ ಆಗಲ್ಲ ಎಂದರು. ಯಡಿಯೂರಪ್ಪ ಅವರು ರೈತರ ಹಸಿರು ಶಾಲು ಹಾಕಿಕೊಂಡು ಸಿಎಂ ಆಗಿ ಪ್ರಮಾಣ ವಚನ ಪಡೆದಿದ್ದಾರೆ. ರೈತರು-ನೇಕಾರರು ನನ್ನ ಎರಡು ಕಣ್ಣುಗಳೆಂದು ಹೇಳಿದ್ದರು. ಪ್ರಧಾನಿ ಮೋದಿಯವರು ದಿನಕ್ಕೆ ನಾಲ್ಕು ಜತೆಗೆ ಬಟ್ಟೆ ಬದಲಿಸುತ್ತಾರೆ. ಆದರೆ, ಇಂದು ರೈತರು-ನೇಕಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಇದು ಮೋದಿ ಮತ್ತು ಯಡಿಯೂರಪ್ಪ ಅವರಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
1 ಲಕ್ಷ ಕೋಟಿ ಪ್ಯಾಕೇಜ್ ಕೊಡಿ: ಉತ್ತರದ ಜನ ಸೌಮ್ಯ. ಆದರೆ, ಒಮ್ಮೆ ಸಿಟ್ಟಿಗೆದ್ದು ನಿಂತರೆ ರಾಜ್ಯದ ಸಿಎಂ, ಸಚಿವರು ಯಾರೂ ರಸ್ತೆ ಮೇಲೆ ತಿರುಗಾಡಲು ಬಿಡಲ್ಲ. ರಾಜ್ಯದಿಂದ ಆಯ್ಕೆಯಾದ 25 ಸಂಸದರು, ಸಂತ್ರಸ್ತರ ಸಮಸ್ಯೆಯನ್ನು ಮೋದಿಯವರಿಗೆ ಹೇಳಿ ಪರಿಹಾರ ತರಬೇಕು. ಆ ಮೂಲಕ ರೈತರ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಒಂದೆಡೆ ಬರ, ಇನ್ನೊಂದೆಡೆ ನೆರೆಯಿಂದ ರಾಜ್ಯದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಎರಡೂ ಸರ್ಕಾರಗಳು, ರೈತರಿಗೆ 1ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ, ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೈ ಮುಗಿದ್ರೂ ಬರಲಿಲ್ಲ: ಇದೇ ಜಿಲ್ಲೆಯಿಂದ ಆಯ್ಕೆಯಾಗಿ, ಉಪಮುಖ್ಯಮಂತ್ರಿಯಾಗಿರುವ ಗೋವಿಂದ ಕಾರಜೋಳರಿಗೆ, ನೆರೆ ಸಂತ್ರಸ್ತರ ಬಹಿರಂಗ ಅಧಿವೇಶನ ಬರುವಂತೆ ಕೈ ಮುಗಿದು ಕೇಳಿಕೊಂಡೆವು. ಆದರೆ, ನನಗೆ ಪೂರ್ವ ನಿಗದಿತ ಕಾರ್ಯಕ್ರಮ ಇವೆ ಎಂದು ಹೊರಟು ಹೋದರು. ಕಾರಜೋಳರಿಗೆ ರೈತರು, ನೇಕಾರರು, ಸಂತ್ರಸ್ತರಿಗಿಂತ ಅವರ ಕಾರ್ಯಕ್ರಮಗಳೇ ಮುಖ್ಯವಾಗಿವೆ. ನೀವೆಲ್ಲ ಸಂತ್ರಸ್ತರಿಗೆ ಸ್ಪಂದಿಸಿ, ಇಲ್ಲವೇ ಖುರ್ಚಿ ಖಾಲಿ ಮಾಡಿ ಎಂಬ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.