Advertisement

ದಿಲ್ಲಿ ಹಿಂಸಾಚಾರ ಸಂತ್ರಸ್ತರಿಗೆ ನ್ಯಾಯ ಸಿಗಲಿ

10:11 AM Mar 04, 2020 | mahesh |

ನಾಗರಿಕ ಸಮಾಜ ಹಿಂಸಾಚಾರದ ಸಂದರ್ಭದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಆಘಾತಕಾರಿ ಆಗಿದೆ. ಇಂಥ ಲೋಪದೋಷಗಳಿರುವ ಒಂದು ವ್ಯವಸ್ಥೆ ಮತ್ತು ಸಮಾಜವನ್ನಿಟ್ಟುಕೊಂಡು ದೇಶದ ಭವಿಷ್ಯ ಹೇಗೆ ಉಜ್ವಲವಾಗಬಹುದು ಎನ್ನುವುದು ಅಂತಿಮವಾಗಿ ಉಳಿಯುವ ಪ್ರಶ್ನೆ.

Advertisement

ಕಳೆದ ವಾರ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ದಿಲ್ಲಿ ಈಗ ಶಾಂತವಾಗಿರಬಹುದು. ಆದರೆ ಈ ಹಿಂಸಾಚಾರ ಅನೇಕ ಪ್ರಶ್ನೆಗಳನ್ನು ಉಳಿಸಿಹೋಗಿದೆ. ಮುಖ್ಯವಾಗಿ ಗಲಭೆಯಲ್ಲಿ ನಮ್ಮ ರಾಜಕೀಯ ನಾಯಕರು ವಹಿಸುತ್ತಿರುವ ಪಾತ್ರಗಳು ಕಳವಳಕಾರಿಯಾಗಿದೆ. ಎರಡನೆಯದಾಗಿ ಇಂಥ ಒಂದು ಹಿಂಸಾಚಾರ ನಡೆಯುವ ಸಂಭವವಿದೆ ಎನ್ನುವುದು ಮೊದಲೇ ಗೊತ್ತಿದ್ದರೂ ಇಡೀ ಪೊಲೀಸ್‌ ವ್ಯವಸ್ಥೆ ವಿಫ‌ಲಗೊಂಡ ರೀತಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಮೂರನೆಯದಾಗಿ ನಾಗರಿಕ ಸಮಾಜ ಹಿಂಸಾಚಾರದ ಸಂದರ್ಭದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಆಘಾತಕಾರಿ ಆಗಿದೆ. ಇಂತಹ ‌ಲೋಪದೋಷಗಳಿರುವ ಒಂದು ವ್ಯವಸ್ಥೆ ಮತ್ತು ಸಮಾಜವನ್ನಿಟ್ಟುಕೊಂಡು ದೇಶದ ಭವಿಷ್ಯ ಹೇಗೆ ಉಜ್ವಲವಾಗಬಹುದು ಎನ್ನುವುದು ಅಂತಿಮವಾಗಿ ಉಳಿಯುವ ಪ್ರಶ್ನೆ.

ರಾಜಕೀಯ ಮುಖಂಡರಾದ ಕಪಿಲ್‌ ಮಿಶ್ರ, ವಾರಿಸ್‌ ಪಠಾಣ್‌, ತಾಹಿರ್‌ ಹುಸೈನ್‌, ಅನುರಾಗ್‌ ಠಾಕೂರ್‌ ಮುಂತಾದವರೆಲ್ಲ ಯಾವ ರೀತಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದರು ಎನ್ನುವುದನ್ನು ಇಡೀ ದೇಶ ನೋಡಿದೆ. ಕಪಿಲ್‌ ಮಿಶ್ರ ನೀಡಿದ ಎಚ್ಚರಿಕೆಯಾಗಲಿ, ವಾರಿಸ್‌ ಪಠಾಣ್‌ರ 100 ಕೋಟಿ ಹಿಂದುಗಳಿಗೆ 15 ಕೋಟಿ ಮುಸ್ಲಿಮರು ಸಾಕು ಎಂಬ ಹೇಳಿಕೆಯಾಗಲಿ, ಗಲಭೆಯಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪ ಎದುರಿಸುತ್ತಿರುವ ತಾಹಿರ್‌ ಹುಸೈನ್‌ ಆಗಲಿ ಇವರೆಲ್ಲ ಆಡುತ್ತಿರುವ ಆಟ ಬಹಳ ಅಪಾಯಕಾರಿಯಾಗಿದೆ. ತಾಹಿರ್‌ ಹುಸೈನ್‌ ಮನೆಯಲ್ಲಿ ಕಲ್ಲುಗಳ ರಾಶಿ, ಪೆಟ್ರೋಲು ಬಾಂಬ್‌ಗಳು ಮತ್ತಿತರ ಮಾರಕ ವಸ್ತುಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಇದರ ಹೊರತಾಗಿಯೂ ಈ ನಾಯಕರ ವಿರುದ್ಧ ಅವರ ಪಕ್ಷಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪರೋಕ್ಷವಾಗಿ ಅವರನ್ನು ಬೆಂಬಲಿಸಿದಂತೆ ಆಗುತ್ತದೆ. ಏಕೆ ಇಂಥ ನಾಯಕರನ್ನು ಪಕ್ಷದಲ್ಲಿಟ್ಟುಕೊಳ್ಳಬೇಕು ಎನ್ನುವುದನ್ನು ಆಯಾಯ ಪಕ್ಷಗಳು ಜವಾಬ್ದಾರಿಯುತ ಸ್ಥಾನಗಳಲ್ಲಿರುವವರು ತಿಳಿಸುವ ಅಗತ್ಯವಿದೆ.

ಗಲಭೆಯಲ್ಲಿ ಎರಡೂ ಸಮುದಾಯಗಳಿಗೆ ಹಾನಿಯಾಗಿದೆ. ಎರಡೂ ಸಮುದಾಯಗಳ ಜನರು ಸತ್ತಿದ್ದಾರೆ. ಅಂಕಿತ್‌ ಶರ್ಮ ಎನ್ನುವ ಗುಪ್ತಚರ ಪಡೆಯ ಅಧಿಕಾರಿಯನ್ನು ಕೊಂದಿರುವ ರೀತಿ ಬೆಚ್ಚಿ ಬೀಳಿಸುವಂತಿದೆ. ಕನಿಷ್ಠ 400 ಇರಿತದ ಗಾಯಗಳು ಅವರ ಮೈಮೇಲೆ ಇದ್ದವು ಎನ್ನುತ್ತಿದೆ ಮರಣೋತ್ತರ ಪರೀಕ್ಷೆಯ ವರದಿ. ಈ ಹತ್ಯೆಯಲ್ಲಿ ತಾಹಿರ್‌ ಹುಸೈನ್‌ ನೇರವಾದ ಕೈವಾಡವಿದೆ ಎನ್ನಲಾಗುತ್ತಿದ್ದರೂ ಪೊಲೀಸರು ಇನ್ನೂ ಅವರನ್ನು ಬಂಧಿಸಿಲ್ಲ. ಆಮ್‌ ಆದ್ಮಿ ಪಕ್ಷದವರ್ಯಾರಾದರೂ ಗಲಭೆಯಲ್ಲಿ ಭಾಗಿಗಳಾಗಿದ್ದರೆ ಇಮ್ಮಡಿ ಶಿಕ್ಷೆ ನೀಡಿ ಎಂದು ಹೇಳಿ ದಿಲ್ಲಿಯ ಮುಖ್ಯಮಂತ್ರಿ ತಮ್ಮ ಜವಾಬ್ದಾರಿಯಿಂದ ಕಳಚಿಕೊಂಡಿದ್ದಾರೆ. ನಾಗರಿಕ ಸಮಾಜವೊಂದು ಇಷ್ಟು ಕ್ರೂರಿಯಾಗಬಹುದೆ? ಹಾಗಾದರೆ ನಾವು ನಿತ್ಯ ಬೋಧಿಸುವ ಶಾಂತಿ, ಸೌಹಾರ್ದ, ಸಹಬಾಳ್ವೆಗಳೆಲ್ಲ ಬರೀ ಬೋಧನೆಗೆ ಮಾತ್ರ ಸೀಮಿತವೆ? ಈ ಪ್ರಶ್ನೆಗಳಿಗೆ ಸಮಾಜವೇ ಉತ್ತರ ಕಂಡುಕೊಳ್ಳಬೇಕು.

ಸುಮಾರು ಎರಡೂವರೆ ತಿಂಗಳಿಂದಲೇ ದಿಲ್ಲಿಯಲ್ಲಿ ಅಸಹನೆ ಹೊಗೆಯಾಡುತ್ತಿತ್ತು. ಅದು ಸ್ಫೋಟಗೊಳ್ಳಲು ಒಂದು ಕಿಡಿಯನ್ನು ಕಾಯುತ್ತಿತ್ತು. ಇದು ಗೊತ್ತಿದ್ದೂ ಪೊಲೀಸರೇಕೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಿಲ್ಲ? ಇಂಥ ಪ್ರಕರಣ ಸಂಭವಿಸಿದಾಗಲೆಲ್ಲ ಪೊಲೀಸ್‌ ಮುಖ್ಯಸ್ಥರನ್ನು ವರ್ಗಾಯಿಸುವ ಅಥವಾ ಅಮಾನತುಗೊಳಿಸುವಂಥ ಕಣ್ಣೊರೆಸುವ ತಂತ್ರ ಇನ್ನೆಷ್ಟು ಕಾಲ ಮುಂದುವರಿಯಬಹುದು?

Advertisement

ಸಾಮಾಜಿಕ ಮಾಧ್ಯಮಗಳೂ ಹಿಂಸಾಚಾರ ಭುಗಿಲೇಳಲು ಸಾಕಷ್ಟು ಕೊಡುಗೆ ನೀಡಿವೆ ಎನ್ನುವುದರಲ್ಲಿ ಅನುಮಾನವಿಲ್ಲ. ದ್ವೇಷದ, ಕುಮ್ಮಕ್ಕು ನೀಡುವಂಥ ಸಂದೇಶಗಳನ್ನು ಸೃಷ್ಟಿಸಿ ಹರಿಯಬಿಡುವ ವ್ಯವಸ್ಥೆ ಇದೆ ಎನ್ನುವುದು ಆಡಳಿತಕ್ಕೂ ಗೊತ್ತಿದೆ, ಪೊಲೀಸರಿಗೂ ಗೊತ್ತಿದೆ. ಆದರೆ ಹಿಂಸಾಚಾರ ತಾಂಡವವಾಡುತ್ತಿರುವಾಗಲೂ ಇಂಥ ಸಂದೇಶಗಳನ್ನು ತಡೆಯುವ ಪ್ರಯತ್ನವಾಗಲಿಲ್ಲ.

ದೇಶ ಅನೇಕ ಬಾರಿ ಇಂಥ ಹಿಂಸಾಚಾರಗಳನ್ನು ಕಂಡಿದೆ. 1984ರ ಸಿಕ್ಖ್ ಹತ್ಯಾಕಾಂಡ, 1999ರ ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡ, 1993ರ ಮುಂಬಯಿ ಹಿಂಸಾಚಾರ, 1987ರ ಹಾಶಿಮ್‌ಪುರ ಗಲಭೆ, 2002ರ ಗುಜರಾತ್‌ ಗಲಭೆ ಹೀಗೆ ಅನೇಕ ಉದಾಹರಣೆಗಳಿವೆ. ಬಹುತೇಕ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲು ನ್ಯಾಯಾಂಗ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಸಿಕ್ಖ್ ಹತ್ಯಾಕಾಂಡದ ಸಂತ್ರಸ್ತರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟ ಮುಗಿದಿಲ್ಲ. ಇದೀಗ ದಿಲ್ಲಿ ಹಿಂಸಾಚಾರದ ಸಂತ್ರಸ್ತರಿಗೂ ಇದೇ ಗತಿಯಾಗಬಾರದು. ಕನಿಷ್ಠ ಕ್ಷಿಪ್ರವಾಗಿ ನ್ಯಾಯ ಸಿಗುವಂತೆ ಮಾಡುವ ಮೂಲಕ ವ್ಯವಸ್ಥೆಯಲ್ಲಿ ಅವರಿಗೆ ವಿಶ್ವಾಸ ಮೂಡುವಂತೆ ಮಾಡುವ ಕೆಲಸವನ್ನಾದರೂ ಈಗ ಎಲ್ಲರೂ ಸೇರಿ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next