Advertisement

ಸಚಿವೆ ನಿರ್ಮಲಾ ಎದುರು ಕಣ್ಣೀರಾದ ಸಂತ್ರಸ್ತರು

11:21 PM Aug 10, 2019 | Team Udayavani |

ಬೆಳಗಾವಿ: ನಗರ ಸೇರಿ ವಿವಿಧೆಡೆ ಸುರಿದ ಧಾರಾ ಕಾರ ಮಳೆಯಿಂದ ಬೆಳಗಾವಿ ಜಿಲ್ಲೆ ತತ್ತರಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರ ಎದುರು ನೆರೆ ಪೀಡಿತ ಸಂತ್ರಸ್ತರು ನೋವು ತೋಡಿಕೊಂಡು ಕಣ್ಣೀರು ಸುರಿಸಿದರು.

Advertisement

ನಗರದ ವಡಗಾಂವಿ ಪ್ರದೇಶದ ಸಾಯಿಭವನದಲ್ಲಿ ಜಿಲ್ಲಾಡಳಿತ ಸ್ಥಾಪಿಸಿರುವ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಅಲ್ಲಿದ್ದ ಮಹಿಳೆಯರು, ಮಳೆ ಬಂದು ನಮ್ಮ ಬದುಕೇ ಕೊಚ್ಚಿಕೊಂಡು ಹೋಗಿದೆ. ಮನೆಯೂ ಇಲ್ಲ, ಉದ್ಯೋಗವೂ ಇಲ್ಲದಂತಾಗಿದೆ. ಸರ್ಕಾರ ನಮ್ಮ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿಕೊಂಡರು.

ನೇಕಾರಿಕೆ ಮಾಡಿಕೊಂಡು ಹೊಟ್ಟೆ ತುಂಬಿಕೊಳ್ಳುತ್ತಿದ್ದೇವೆ. ಮಳೆಯಿಂದ ಮನೆ ಹಾಗೂ ನಮ್ಮ ಉದ್ಯೋಗಕ್ಕೆ ಆಸರೆಯಾಗಿದ್ದ ಮಗ್ಗಗಳೂ ನೀರು ಪಾಲಾಗಿವೆ. ಸೂಕ್ತ ಪುನರ್ವಸತಿ ಕಲ್ಪಿಸಿ ಮಗ್ಗಗಳನ್ನೂ ಕೊಡಿಸಬೇಕು ಎಂದು ಸಂತ್ರಸ್ತ ಮಹಿಳೆ ವಿದ್ಯಾರಾಣಿ ಮಕಾಟಿ ಕಣ್ಣೀರಿಡುತ್ತಿದ್ದಂತೆ ಸಚಿವೆಯ ಕಣ್ಣುಗಳೂ ಒದ್ದೆಯಾಗಿದ್ದವು. ಆಗ ಜಿಲ್ಲಾ ಧಿಕಾರಿ ಡಾ|ಎಸ್‌.ಬಿ. ಬೊಮ್ಮನಹಳ್ಳಿ ಅವರನ್ನು ಕರೆಯಿಸಿ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಸೂಚಿಸಿದರು. ಬಳಿಕ ಆ ಮಹಿಳೆಯನ್ನು ತಬ್ಬಿ ಸಂತೈಸಿ ಧೈರ್ಯ ನೀಡಿದರು.

ಚಪ್ಪಾಳೆಯ ಸ್ವಾಗತ: ಈ ಮಧ್ಯೆ ಪುನರ್ವಸತಿ ಕೇಂದ್ರಕ್ಕೆ ಸಚಿವೆ ನಿರ್ಮಲಾ ಆಗಮಿಸುತ್ತಿದ್ದಂತೆ ಸಂತ್ರಸ್ತರು ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಖುದ್ದಾಗಿ ಪ್ರತಿ ಮಹಿಳೆಯ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದರು. ಸಾಲಾಗಿ ಕುಳಿತಿದ್ದ ಸಂತ್ರಸ್ತರ ನೋವಿಗೆ ದನಿಯಾದರು. ಶಾಂತ ಚಿತ್ತದಿಂದ ಅವರ ಮಾತು ಕೇಳಿದರು. ಕೂಡಲೇ ಪರಿಹಾರ ಒದಗಿಸುವ ಭರವಸೆ ನೀಡಿದರು.

ಇದಕ್ಕೂ ಮುನ್ನ ಧಾಮಣೆ ರಸ್ತೆ ಹಾಗೂ ನೇಕಾರ ಕಾಲೋನಿಗೆ ಭೇಟಿ ನೀಡಿದ ಸಚಿವರು ಮನೆಗಳಿಗೆ ನೀರು ನುಗ್ಗಿದ ಪ್ರದೇಶವನ್ನು ವೀಕ್ಷಿಸಿದರು. ಬಳ್ಳಾರಿ ನಾಲಾದಿಂದ ಹಾನಿಗೊಳಗಾದ ನೇಕಾರ ಕುಟುಂಬದವರನ್ನು ಭೇಟಿಯಾಗಿ ಅಗತ್ಯ ಸೌಲಭ್ಯ ನೀಡುವುದಾಗಿ ತಿಳಿಸಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅ ಧಿಕಾರಿಗಳಿಂದ ಸಚಿವೆ ಜಿಲ್ಲೆಯ ಪ್ರವಾಹ ಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡರು. ಇನ್ನೂ ಹೆಚ್ಚಿನ ಸೌಲಭ್ಯ ಬೇಕಾದರೆ ಕೊಡಲು ಸಿದ್ಧ.

Advertisement

ಸೇನೆಯ ಹೆಲಿಕಾಪ್ಟರ್‌ ಸೇರಿಯಾವುದೇ ಸಹಾಯ ಬೇಕಾದರೂ ನೀಡಲು ಕೇಂದ್ರ ಸರಕಾರ ಸಿದ್ಧವಿದೆ ಎಂದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಆಗಿರುವ ಹಾನಿಯ ತಾಲೂಕುವಾರು ಸಮಗ್ರ ಮಾಹಿತಿ ನೀಡಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರು ಸವಿಸ್ತಾರವಾಗಿ ಪ್ರವಾಹ ಕುರಿತು ಮಾಹಿತಿ ನೀಡಿದರು. ಸಂತ್ರಸ್ತರು ಕನ್ನಡದಲ್ಲಿ ಹೇಳುತ್ತಿರುವುದನ್ನು ಹಿಂದಿಯಲ್ಲಿ ಅನುವಾದಿಸಿ ತಿಳಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next