Advertisement

ಹಣೆಗೆ ಗನ್‌ ಇಟ್ಟು ಕಾರು ಚಾಲಕನ ದರೋಡೆ ಮಾಡಿದ ದುಷ್ಕರ್ಮಿಗಳು!

10:24 AM Jan 22, 2020 | sudhir |

ಬೆಂಗಳೂರು:ಕಾರು ಚಾಲಕನಿಗೆ ಗನ್‌ ತೋರಿಸಿ ಬೆದರಿಸಿದ ದುಷ್ಕರ್ಮಿಗಳ ಗುಂಪು ಆತನಿಂದ ಹಣ,ಮೊಬೈಲ್‌ ಕಿತ್ತುಕೊಂಡು ಕಾರು ಸಮೇತ ಪರಾರಿಯಾದ ಘಟನೆ ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಈ ವಿಚಾರ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಸೋಲದೇವನಹಳ್ಳಿ ಪೊಲೀಸರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ಪೊಲೀಸರನ್ನೇ ತಳ್ಳಿರುವ ದುಷ್ಕರ್ಮಿಗಳು ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಮಂಗಳವಾರ ನಸುಕಿನ ವೇಳೆ 2.30ರ ಸುಮಾರಿಗೆ ಕಾರು ಬಿಟ್ಟು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಕಾರು ಚಾಲಕ ಗಿರೀಶ್‌ ಎಂಬುವವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ಖಾಸಗಿ ಕಂಪೆನಿಯೊಂದರಲ್ಲಿ ಕಾರು ಚಾಲಕನಾಗಿರುವ ಗಿರೀಶ್‌ ಅವರು ಸೋಮವಾರ ತಡರಾತ್ರಿ 12.30ರ ಸುಮಾರಿಗೆ ನೆಲ್ಲಕದರನೇಹಳ್ಳಿ ಸಮೀಪ ಹೋಗುತ್ತಿದ್ದರು. ರಸ್ತೆಯಲ್ಲಿ ಹಂಪ್ಸ್‌ ಇದ್ದ ಕಾರಣ ನಿಧಾನಕ್ಕೆ ಕಾರು ಚಲಾಯಿಸುತ್ತಿದ್ದಾಗಲೇ ಕಾರು ಹಾಗೂ ಬೈಕ್‌ಗಳಲ್ಲಿ ಬಂದ ಆರಕ್ಕೂ ಅಧಿಕ ಮಂದಿ ಅವರನ್ನು ಅಡ್ಡಗಟ್ಟಿದ್ದಾರೆ.

ಬಳಿಕ ಗನ್‌ ತೋರಿಸಿ ಕೊಲ್ಲುವುದಾಗಿ ಬೆದರಿಸಿದ ದುಷ್ಕರ್ಮಿಗಳು ಗಿರೀಶ್‌ ಅವರ ಬಳಿಯಿದ್ದ 16 ಸಾವಿರ ರೂ. ನಗದು, ಮೊಬೈಲ್‌ ಕಿತ್ತುಕೊಂಡಿದ್ದಾರೆ. ಬಳಿಕ ಕಾರಿನಿಂದ ಅವರನ್ನು ಕೆಳಗೆ ಇಳಿಸಿ ಕಾರಿನ ಸಮೇತ ಪರಾರಿಯಾಗಿದ್ದಾರೆ.

Advertisement

ಪೊಲೀಸರನ್ನು ತಳ್ಳಿ ಎಸ್ಕೇಪ್‌ ಆದರು!
ಸ್ಥಳೀಯರ ನೆರವಿನೊಂದಿಗೆ ಗಿರೀಶ್‌ ನೀಡಿದ ಮಾಹಿತಿ ಮೇರೆಗೆ ರಾಜಗೋಪಾಲ ನಗರ ಹಾಗೂ ಸೋಲದೇವನಹಳ್ಳಿ ಪೊಲೀಸರು ದರೋಡೆ ಕೃತ್ಯ ಮಾಡಿದ್ದ ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ನಸುಕಿನ ವೇಳೆ ರಾತ್ರಿ 2.30ರ ವೇಳೆ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್‌ ಹಾಕಿಕೊಂಡು ಸೋಲದೇವನಹಳ್ಳಿ ಠಾಣೆಯ ಮುಖ್ಯಪೇದೆ ಸಿದ್ದಲಿಂಗ ಸ್ವಾಮಿ ಹಾಗೂ ಪೊಲೀಸ್‌ ಪೇದೆ ಶ್ರೀನಿವಾಸ್‌ ಗಸ್ತು ಕಾರ್ಯನಿರ್ವಹಿಸುತ್ತಿದ್ದರು.
ಈ ವೇಳೆ ವೇಗವಾಗಿ ಬಂದ ಕಾರನ್ನು ಅವರು ಅಡ್ಡಹಾಕಿದ್ದಾರೆ. ಆದರೆ, ಕಾರು ನಿಲ್ಲಿಸದೇ ಬ್ಯಾರಿಕೇಡ್‌ಗೆ ಗುದ್ದಿ ಪೊಲೀಸ್‌ ಸಿಬ್ಬಂದಿಯನ್ನು ತಳ್ಳಿದ ಮೂವರು ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಯೂ ಗಾಯಗೊಂಡಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next