Advertisement

ಸಂತ್ರಸ್ತರ ಮನೆ ನಿರ್ಮಾಣ: ಮುಂಗಡ ಒದಗಿಸಲು ಆಗ್ರಹ

11:16 PM Sep 16, 2019 | mahesh |

ಮಂಗಳೂರು: ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಹಣವನ್ನು ಮುಂಗಡ ನೀಡಬೇಕು ಎಂದು ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

Advertisement

ಸರಕಾರವು ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ 5 ಲಕ್ಷ ರೂ. ನೀಡುತ್ತದಾದರೂ ಅದು ಮಂಜೂರಾಗುವುದು ಕಾಮಗಾರಿ ಆರಂಭಗೊಂಡ ಬಳಿಕ. ಸರ್ವಸ್ವವನ್ನೂ ಕಳೆದುಕೊಂಡಿರುವ ಸಂತ್ರಸ್ತರಿಗೆ ಕಾಮಗಾರಿ ಆರಂಭಿಸಲು ಅಸಾಧ್ಯವಾಗಿರುವುದರಿಂದ ಪರಿಹಾರ ಧನವನ್ನು ಜಿ.ಪಂ. ಸಿಇಒ ಖಾತೆಗೇ ಜಮೆ ಮಾಡಿ ಸಂತ್ರಸ್ತರಿಗೆ ಮುಂಗಡವಾಗಿ ಕಂತುಗಳಲ್ಲಿ ಬಿಡುಗಡೆ ಮಾಡಬೇಕು ಎಂದು ಸದಸ್ಯೆ ಮಮತಾ ಗಟ್ಟಿ ಹೇಳಿದರು. ಸಿಇಒ ಆರ್‌. ಸೆಲ್ವಮಣಿ ಈ ವಿಚಾರವನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದರು.

ಸಂತ್ರಸ್ತರಿಗೆ 10 ಸಾವಿರ ರೂ. ತುರ್ತು ಪರಿಹಾರವೂ ಸರಿಯಾಗಿ ಸಿಕ್ಕಿಲ್ಲ ಎಂದು ಸದಸ್ಯರಾದ ಎಂ.ಎಸ್‌. ಮಹಮ್ಮದ್‌, ಮಂಜುಳಾ ಮಾವೆ, ಪ್ರಕಾಶ್‌ ಶೆಟ್ಟಿ ಹೇಳಿದರು. ಉತ್ತರಿಸಿದ ಸಿಇಒ, ಜಿಪಿಎಸ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಬಹುತೇಕ ಮಂದಿಗೆ ನೀಡಲಾಗಿದೆ. ಬಾಕಿ ಪ್ರಕರಣಗಳನ್ನು ಪರಿಶೀಲಿಸಿ ನೀಡಲಾಗುವುದು. ಅಧಿಕಾರಿಗಳ ತಪ್ಪು ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಹಾನಿಯಾಗಿದ್ದು, ಹೆಚ್ಚು ಅನುದಾನ ನೀಡಬೇಕು ಎಂದು ಕೊರಗಪ್ಪ ನಾೖಕ್‌, ಸೌಮ್ಯಲತಾ, ಸಾಹುಲ್‌ ಹಮೀದ್‌ ಆಗ್ರಹಿಸಿದರು.

ಶುದ್ಧ ಕುಡಿಯುವ ನೀರು ಘಟಕ: ಸೆ. 20ರಂದು ಸಭೆ
ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆಗೆ 4 ಬಾರಿ ಟೆಂಡರ್‌ ಕರೆದರೂ ಯಾರೂ ಸ್ಪಂದಿಸಿಲ್ಲ. ನಿರ್ವಹಣೆಗಾಗಿ ಇರುವ ಮೊತ್ತವನ್ನು ಆಯಾ ಗಾ.ಪಂ.ಗಳಿಗೆ ನೀಡಿ ಅವರೇ ನಿರ್ವಹಿಸುವ ಹೊಣೆ ವಹಿಸುವ ಬಗ್ಗೆ ಚರ್ಚಿಸಲು ಸೆ.20ರಂದು ಸಭೆ ಕರೆಯಲಾಗಿದೆ ಎಂದು ಸಿಇಒ ತಿಳಿಸಿದರು. ಪಿ.ಪಿ. ವರ್ಗೀಸ್‌, ಧರಣೇಂದ್ರ ಕುಮಾರ್‌, ತುಂಗಪ್ಪ ಬಂಗೇರ, ಹರೀಶ್‌ ಕಂಜಿಪಿಲಿ, ಸುಚರಿತ ಶೆಟ್ಟಿ, ಸರ್ವೋತ್ತಮ ಗೌಡ ಶುದ್ಧ ನೀರಿನ ಘಟಕದ ಅವ್ಯವಸ್ಥೆ ಬಗ್ಗೆ ಗಮನ ಸೆಳೆದರು.

Advertisement

ಬಸ್‌ಗಳಲ್ಲಿ ಮೀಸಲು ಆಸನ ನಿಯಮ ಪಾಲನೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಶಾ ತಿಮ್ಮಪ್ಪ ಗೌಡ ಆಗ್ರಹಿಸಿದರು. ವಿದ್ಯಾರ್ಥಿಗಳಿಗೆ ಸಹಾಯ ವಾಗುವಂತೆ ಉಪ್ಪಿನಂಗಡಿ-ಮಂಗಳೂರು ನಡುವೆ ಹೆಚ್ಚಿನ ಕಡೆ ಕೆಎಸ್ಸಾ ರ್ಟಿಸಿ ಬಸ್‌ ನಿಲುಗಡೆ ನೀಡಬೇಕು ಎಂದು ಶಯನಾ ಜಯಾನಂದ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next