Advertisement
ಜಿಲ್ಲೆಯ ಮಲಪ್ರಭಾ ಮತ್ತು ಬೆಣ್ಣೆಹಳ್ಳ ಆರ್ಭಟಕ್ಕೆ ನಲುಗಿ, ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿರುವ ರೋಣ ತಾಲೂಕಿನ ನೆರೆ ಪೀಡಿತ ಗ್ರಾಮಗಳಲ್ಲಿ ಗುರುವಾರ ಕಂಡು ಬಂದ ಚಿತ್ರಣ ಇದು.
Related Articles
Advertisement
ನವ ಗ್ರಾಮದಲ್ಲಿ ಕುಡಿಯಲು ನೀರು ಕಲ್ಪಿಸುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ನೀರಿನ ಟ್ಯಾಂಕರ್ ಬಾರದ ಹಿನ್ನೆಲೆಯಲ್ಲಿ ನೆರೆ ಪೀಡಿತ ಪ್ರದೇಶದಲ್ಲಿ ಪರದಾಡುವಂತಾಗಿದೆ. ಕುಡಿಯಲು ಹಾಗೂ ದಿನ ಬಳಕೆಗಾಗಿ ಬಹುದೂರ ಪ್ರದೇಶದಿಂದ ನೀರು ಹೊತ್ತು ತರುವಂತಾಗಿದೆ. ನೆರೆ ಸಂತ್ರಸ್ತರನ್ನು ನವ ಗ್ರಾಮಗಳಿಗೆ ಸ್ಥಳಾಂತರಿಸಿದ ಬಳಿಕ ಒಂದೆರಡು ದಿನಗಳ ಕಾಲ ಎಲ್ಲವನ್ನೂ ಚೆನ್ನಾಗಿಯೇ ನೋಡಿಕೊಂಡ ಅಧಿಕಾರಿಗಳು, ಬಳಿಕ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆಂದು ಮಹಿಳೆಯರ ಅಳಲು ತೋಡಿಕೊಂಡರು.
ಪ್ರವಾಹ ಬರುತ್ತಿದ್ದಂತೆ ಆಪತ್ಭಾಂದವರಂತೆ ಧಾವಿಸುವ ಅಧಿಕಾರಿಗಳು, ಸುರಕ್ಷಿತವಾಗಿ ನವ ಗ್ರಾಮ ಹಾಗೂ ಪರಿಹಾರ ಕೇಂದ್ರಗಳಿಗೆ ತಲುಪಿಸಿ, ಕೈತೊಳೆದುಕೊಳ್ಳುತ್ತಿದ್ದಾರೆ. ನವ ಗ್ರಾಮದಲ್ಲಿ ನೀರು, ರಸ್ತೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ನೆರೆ ಇಳಿಯುತ್ತಿದ್ದಂತೆ ಮತ್ತೆ ಮೂಲ ಗ್ರಾಮಗಳಿಗೆ ತೆರಳುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಇದಕ್ಕೆ ಹೋಲಿಸಿದರೆ, ಹೊಳೆ ಮಣ್ಣೂರಿನ ನವ ಗ್ರಾಮದಲ್ಲಿ ನೀರಿನ ಸೌಕರ್ಯ ಉತ್ತಮವಾಗಿದೆ. ಆದರೆ, ರಸ್ತೆ ಮತ್ತಿತರೆ ಮೂಲ ಸೌಕರ್ಯಗಳ ಕೊರತೆಯಲ್ಲಿ ಭಿನ್ನವಾಗಿಲ್ಲ. ಹೊಳೆಆಲೂರು ಹಾಗೂ ಹೊಳೆಮಣ್ಣೂರು, ಮೆಣಸಗಿ ನವ ಗ್ರಾಮಗಳಲ್ಲಿ ಸಂತ್ರಸ್ತರಿಗಾಗಿ ಹೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಅನೇಕರು ತಾವು ತಾತ್ಕಾಲಿಕವಾಗಿ ವಾಸವಿರುವ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕವನ್ನೇ ಪಡೆದಿಲ್ಲ. ಇಂದು ಇದ್ದು, ನಾಳೆ ಹೋಗುವುದಕ್ಕಾಗಿ ಯಾಕೆ ನೂರಾರು ರೂಪಾಯಿ ಖರ್ಚು ಮಾಡಬೇಕೆಂಬ ಮನಃಸ್ಥಿತಿಯಿಂದ ಕತ್ತಲೆಯಲ್ಲೇ ರಾತ್ರಿ ಕಳೆಯುತ್ತಿದ್ದಾರೆ.
•ವೀರೇಂದ್ರ ನಾಗಲದಿನ್ನಿ