ಕಕ್ಕೇರಾ: ನೆರೆ ಹಾವಳಿಯಿಂದಾಗಿ ಹಾನಿಯಾದ ಮೂಲಭೂತ ಸೌಕರ್ಯಗಳಾದ ಮನೆ ಇನ್ನಿತರ ಕುರಿತು ಸಮಗ್ರ ಸಮೀಕ್ಷೆ ನಡೆಸಿ ವರದಿ ತಯಾರಿಸಿದ ನಂತರ ಸೌಕರ್ಯ ಒದಗಿಸುವುದಾಗಿ ಜಿಲ್ಲಾ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹೇಳಿದರು.
ಸಮೀಪದ ತಿಂಥಣಿ ಮೌನೇಶ್ವರ ಆವರಣದಲ್ಲಿ ಸೋಮವಾರ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನೆರೆ ಹಾವಳಿಯಿಂದ ಪ್ರತಿಯೊಂದು ಕಡೆ ಹಾನಿಯಾಗಿದೆ. ಗ್ರಾಮಗಳಲ್ಲಿಯು ನೀರು ಹೊಕ್ಕು ಮನೆ ಇನ್ನಿತರ ದವಸ ಧಾನ್ಯ ಹಾಳಾಗಿವೆ. ಹೀಗಾಗಿ ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಸಿದ್ಧಪಡಿಸಿದ ನಂತರ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
57 ಮನೆ ಇಲ್ಲ: ಈ ಹಿಂದೇ 2009ರಲ್ಲಿ ನೆರೆ ಹಾವಳಿಯಿಂದಾಗಿ ತಿಂಥಣಿ ಗ್ರಾಮದ ಕುಟುಂಬಗಳಿಗೆ ಒಟ್ಟು 137 ಬೇಡಿಕೆ ಇತ್ತು. ಅದರಲ್ಲಿ ಅಂದಿನ ಸರಕಾರ 80 ಮನೆಗಳ ನಿರ್ಮಿಸಿಕೊಡಲಾಗಿದೆ. ಆದರೆ ಇನ್ನೂ 57 ಮನೆಗಳು ಮಾತ್ರ ಬಾಕಿ ಉಳಿಸಲಾಯಿತು. ಈಗಾ ನಮ್ಮ ಪರಸ್ಥಿತಿ ಇನ್ನೂ ಸುಧಾರಿಸಿಲ್ಲ. ವಾಸಿಸಲು ಸಮಸ್ಯೆಯಾಗಿದೆ, ಮೊದಲು ನಮಗೆ ಬಾಕಿ ಉಳಿದ ಮನೆಗಳ ನಿರ್ಮಿಸಿಕೊಡಿ ಎಂದು ಗ್ರಾಮದ ವಿವಿಧ ಜನರು ಸಹಾಯಕ ಆಯಕ್ತರ ಎದುರು ಸಮಸ್ಯೆ ತೋಡಿಕೊಂಡರು.
ನಂತರ ಗ್ರಾಮಸ್ಥರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಅವರು, ಹೀಗಾಗಲೇ ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಮೀಕ್ಷೆ ಪಟ್ಟಿ ಸಿದ್ದಪಡಿಸಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೆ ಆತಂಕಗೊಳ್ಳಬಾರದು. ವರದಿ ಬಂದ ನಂತರ ಮನೆಗಳ ನಿರ್ಮಾಣ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ಶುದ್ಧ ಕುಡಿಯುವ ನೀರಿಗಾಗಿ ಗ್ರಾಪಂ ವತಿಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲಾಗುವುದು. ಅಗತ್ಯ ಬಿದ್ದರೆ ಗ್ರಾಮದಲ್ಲಿ ಇನ್ನೂ ಎರಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಯೋಚಿಸಲಾಗುವುದು. ಮೂಲ ಸೌಕರ್ಯ ಒದಗಿಸಲು ಮುತುವರ್ಜಿ ವಹಿಸಲಾಗುತ್ತಿದೆ ಎಂದು ಅವರು ಭರವಸೆ ನೀಡಿದರು.
ಕೃಷ್ಣಾ ನದಿ ನೀರು ಹೊಕ್ಕ ಸ್ಥಳಗಳಲ್ಲಿ ಈಗಾಗಲೇ ಗಲೀಜು ಆಗಿ ಕಲುಷಿತ ವಾತಾವರಣ ಸೃಷ್ಟಿಸಿದೆ. ಮುಂದೇ ಬರುಬಹುದಾದ ಸಾಂಕ್ರಮಿಕ ರೋಗಗಳ ತಡೆಗಟ್ಟಲು ಅಲ್ಲಲ್ಲಿ ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡಲು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದಕ್ಕೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.ಇದೇ ವೇಳೆ ನೆರೆ ಸಂತ್ರಸ್ತರಿಂದ ವಿವಿಧ ಹಾನಿ ಕುರಿತು ಆಹ್ವಾಲು ಸ್ವೀಕರಿಸಲಾಯಿತು. ತಹಶೀಲ್ದಾರ್ ಸುರೇಶ ಅಂಕಲಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ, ತಾಪಂ ಸದಸ್ಯ ಮಲ್ಲಿಕಾರ್ಜುನ ಸಾಹುಕಾರ, ಗಂಗಾಧರ ನಾಯಕ ತಿಂಥಣಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಿ.ಎಂ. ಹಳ್ಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.