ನವದೆಹಲಿ : ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಅವರು ಫಿಫಾ ವಿಶ್ವಕಪ್ 2022 ರ ಉದ್ಘಾಟನಾ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲು ಕತಾರ್‌ಗೆ ಭೇಟಿ ನೀಡಿದ್ದಾರೆ.
ಕತಾರ್ ಭೇಟಿಯ ಸಮಯದಲ್ಲಿ, ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದರೊಂದಿಗೆ, ಉಪರಾಷ್ಟ್ರಪತಿ ಅವರು ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಲಿದ್ದಾರೆ.
ವಿಶ್ವದ 32 ರಾಷ್ಟ್ರಗಳು ಡಿ. 18ರ ತನಕ ಫುಟ್‌ಬಾಲ್ ವಿಶ್ವಕಪ್ ಗೆಲ್ಲಲು ಪೈಪೋಟಿ ನಡೆಸಲಿವೆ. ವಿಶ್ವದ ಫುಟ್‌ಬಾಲ್ ಪ್ರೇಮಿಗಳೆಲ್ಲ ಅರಬ್ ನಾಡಿನಲ್ಲಿ ಬೀಡು ಬಿಡಲಾರಂಭಿಸಿದ್ದಾರೆ.
ನ. 20ರ ರವಿವಾರ ಕತಾರ್ ಪಾಲಿಗೆ ಐತಿಹಾಸಿಕ ದಿನವಾಗಲಿದೆ. ಅದು ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿಳಿಯಲಿದ್ದು, ಫಿಫಾ ರ್‍ಯಾಂಕಿಂಗ್‌ನಲ್ಲಿ ತನಗಿಂತ ಕೇವಲ 5 ಸ್ಥಾನ ಮೇಲಿರುವ ಈಕ್ವಡಾರ್ ವಿರುದ್ಧ ಸೆಣಸುತ್ತಿದೆ.
ಇದು ಏಷ್ಯಾದಲ್ಲಿ ನಡೆಯುತ್ತಿರುವ 2ನೇ ವಿಶ್ವಕಪ್ ಪಂದ್ಯಾವಳಿಯಾಗಿದ್ದು, 2002ರಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಜಂಟಿಯಾಗಿ ಸಂಘಟಿಸಿದ್ದವು. ಹಾಗೆಯೇ 32 ತಂಡಗಳು ಪಾಲ್ಗೊಳ್ಳಲಿರುವ ಕೊನೆಯ ವಿಶ್ವಕಪ್ ಕೂಡ ಇದಾಗಬಹುದು. 2026ರಲ್ಲಿ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆಯೋಜಿಸಲಿರುವ ಕೂಟದಲ್ಲಿ 48 ತಂಡಗಳು ಸೆಣಸಲಿವೆ.