ಹೊಸನಗರ: ಶೌಚಗೃಹ ಮಂಜೂರಾದ ಫಲಾನುಭವಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಗ್ರಾಪಂ ಉಪಾಧ್ಯಕ್ಷರೇ ಮರ ಏರಿ ಕುಳಿತು ಪ್ರತಿಭಟಿಸಿದ ಘಟನೆ ತಾಲೂಕಿನ ಮೂಡುಗೊಪ್ಪ ನಗರದಲ್ಲಿ ನಡೆದಿದೆ.
ಮೂಡುಗೊಪ್ಪ ನಗರ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಸುಮಾರು ಐದು ತಾಸು ಮರದ ಮೇಲೆ ಕುಳಿತುಕೊಳ್ಳುವ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೂಡುಗೊಪ್ಪ ನಗರ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 29 ಫಲಾನುಭವಿಗಳಿಗೆ ಶೌಚಗೃಹ ಮಂಜೂರಾಗಿದೆ. ಇವರಲ್ಲಿ ಕೆಲವರಿಗೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನು ಕೆಲವರಿಗೆ ಅನುದಾನ ನೀಡಿಲ್ಲ. ಮರಿಯ ಎಂಬ ಪಾರ್ಶ್ವವಾಯು ಪೀಡಿತರೂ ಸಹ ಅನುದಾನ ಪಡೆಯಲು ಕಚೇರಿಗೆ ಅಲೆಯುತ್ತಿದ್ದಾರೆ. ಈ ವಿಷಯ ಅರಿತ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಅಧಿ ಕಾರಿಗಳ ನೀತಿ ಖಂಡಿಸಿ ಗ್ರಾಪಂ ಎದುರಿನ ಮರ ಏರಿ ಕುಳಿತು ವಿನೂತನ ಪ್ರತಿಭಟನೆ ಆರಂಭಿಸಿದ್ದಾರೆ.
ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದ ಬಗ್ಗೆ ಅವರ ಬ್ಯಾಂಕ್ ಖಾತೆ ಪಾಸ್‌ಬುಕ್ ತೋರಿಸುವ ತನಕ ಮರದಿಂದ ಕೆಳಗಿಳಿಯಲ್ಲ. ಹಣ ನೀಡಿದ ಕೆಲವರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಬಡ ಫಲಾನುಭವಿಗಳನ್ನು ಸತಾಯಿಸಲಾಗುತ್ತಿದೆ. ತಾರತಮ್ಮು ಹೋಗಲಾಡಿಸಿ, ಸಮರ್ಪಕ ಉತ್ತರ ದೊರೆಯುವವರೆಗೂ ಮರದ ಮೇಲೆ ಇರುವುದಾಗಿ ಅವರು ಎಚ್ಚರಿಸಿದರು.
ಉಪಾಧ್ಯಕ್ಷರು ಮರ ಏರಿ ಪ್ರತಿಭಟಿಸುತ್ತಿರುವ ವಿಷಯ ತಿಳಿದು ತಾಪಂ. ಕಾರ್ಯನಿರ್ವಾಹಕ ಅ ಧಿಕಾರಿ ಡಾ. ರಾಮಚಂದ್ರ ಭಟ್, ಪಿಡಿಒ ವಿಶ್ವನಾಥ ಮಾತುಕತೆ ನಡೆಸಿದರು. ವೈಯಕ್ತಿಕವಾಗಿ ಪಾರ್ಶ್ವವಾಯು ಪೀಡಿತ ಮರಿಯ ಅವರಿಗೆ ಶೌಚಗೃಹ ನಿರ್ಮಾಣದ ಅನುದಾನ 12 ಸಾವಿರ ರೂ. ನೀಡಿದರು. ನಂತರ ಉಪಾಧ್ಯಕ್ಷರು ಕೆಳಗಿಳಿದು ಪ್ರತಿಭಟನೆ ಅಂತ್ಯಗೊಳಿಸಿದರು.