ಧಾರವಾಡ: ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಫೆ.1ರಂದು ಹುಬ್ಬಳ್ಳಿ ಆಗಮಿಸುತ್ತಿದ್ದು, ಪ್ರವಾಸ, ಭದ್ರತೆ ಸೇರಿದಂತೆ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉಪರಾಷ್ಟ್ರಪತಿಗಳು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ನ ಕಾರ್ಯಕ್ರಮ ಹಾಗೂ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಯಶಸ್ವಿ ಆಯೋಜನೆ ಮತ್ತು ಶಿಷ್ಟಾಚಾರ ಪಾಲನೆಗೆ ವಿವಿಧ ಸಮಿತಿ ರಚಿಸಿ, ಜವಾಬ್ದಾರಿ ನೀಡಲಾಗುವುದು. ವಿವಿಧ ಇಲಾಖೆ ಅಧಿಕಾರಿಗಳು ಅಚ್ಚುಕಟ್ಟಾಗಿ ನಿಗದಿತ ಕಾರ್ಯ ನಿರ್ವಹಿಸಬೇಕೆಂದರು.
ಫೆ.1ರಂದು ಸಂಜೆ ಹುಬ್ಬಳ್ಳಿಗೆ ಆಗಮಿಸುವ ಉಪರಾಷ್ಟ್ರಪತಿಯವರು ಸರ್ಕ್ನೂಟ್ ಹೌಸ್‌ನಲ್ಲಿ ವಾಸ್ತವ್ಯ ಮಾಡಲಿದ್ದು, ಫೆ.2ರಂದು ಬೆಳಿಗ್ಗೆ ದೇಶಪಾಂಡೆ ಫೌಂಡೇಶನ್ ಆಯೋಜಿಸಿರುವ ಸ್ಕಿಲ್ ಇಂಡಿಯಾ ಟ್ರೇನಿಂಗ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ ಹುಬ್ಬಳ್ಳಿ-ಧಾರವಾಡ ಬಸ್ ತ್ವರಿತ ಸಾರಿಗೆ ವ್ಯವಸ್ಥೆ (ಎಚ್‌ಡಿಬಿಆರ್‌ಟಿಎಸ್) ಸೇವೆಗಳು, ಹೊಸ ಬಸ್‌ಗಳು ಹಾಗೂ ಇಂಟರ್ ಚೇಂಜ್ ವ್ಯವಸ್ಥೆಗೆ ಚಾಲನೆ ನೀಡಲಿದ್ದು, ರಾಯ್ಕರ್ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಗಣ್ಯಾತಿಗಣ್ಯರು ಭಾಗವಹಿಸಲಿರುವುದರಿಂದ ಶಿಷ್ಟಾಚಾರ ಪಾಲನೆ ಬಹಳ ಮಹತ್ವದ್ದಾಗಿರುತ್ತದೆ. ಅವರನ್ನು ಬರಮಾಡಿಕೊಳ್ಳುವುದು, ವಾಹನಗಳ ಸಿದ್ಧತೆ, ವಸತಿ, ಭದ್ರತಾ ಕೊಠಡಿ, ವೈದ್ಯಕೀಯ ಸೌಕರ್ಯಗಳು, ತಜ್ಞವೈದ್ಯರ ತಂಡ, ವೇದಿಕೆ ಯೋಜನೆ ಸೇರಿದಂತೆ ಎಲ್ಲ ಸಿದ್ಧತೆಗಳು ಅಚ್ಚುಕಟ್ಟಾಗಿ ಇರಬೇಕು. ಅದೇ ದಿನ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ರಾಜ್ಯ ಸರ್ಕಾರದ ಅನೇಕ ಸಚಿವರು ಆಗಮಿಸುವುದರಿಂದ ವಾಹನ ಸಂಚಾರ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಎಚ್‌ಡಿಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮಾತನಾಡಿ, ನಮ್ಮ ಕಾರ್ಯಕ್ರಮ ಸಾರ್ವಜನಿಕ ವಲಯದ ಸರ್ಕಾರಿ ಕಾರ್ಯಕ್ರಮ ಆಗಿರುವುದರಿಂದ ಆಹ್ವಾನ ಪತ್ರಿಕೆ ಸೇರಿದಂತೆ ಎಲ್ಲವೂ ನಿಯಮಾನುಸಾರ ನಡೆಯಬೇಕು. ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳನ್ನು ಶಿಸ್ತಿನಿಂದ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ|ಬಿ.ಸಿ.ಸತೀಶ, ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್ ರುದ್ರಪ್ಪ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕ್ರೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.