Advertisement

ಅತ್ಯಾಚಾರ, ಲವ್‌ ಜೆಹಾದ್‌: ಬುದ್ಧಿಜೀವಿಗಳ ಮೌನಕ್ಕೆ ಆಕ್ರೋಶ

03:00 AM Jul 05, 2018 | Team Udayavani |

ಪುತ್ತೂರು: ಮಧ್ಯಪ್ರದೇಶದಲ್ಲಿ 7 ವರ್ಷದ ಮುಗ್ಧ ಬಾಲೆಯನ್ನು ಅತ್ಯಾಚಾರ ಮಾಡಿ, ಅಮಾನುಷವಾಗಿ ಕೊಲೆ ಮಾಡಿದ್ದರೂ ಬುದ್ಧಿಜೀವಿಗಳು, ಎಡಪಂಥೀಯರು ಏಕೆ ಮಾತನಾಡುತ್ತಿಲ್ಲ ಎಂದು ಬಜರಂಗ ದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದ ಮಾಂಡ್ಸೂರ್‌ ನಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಮತ್ತು ಕಲಬುರಗಿಯ ವಾಣಿಜ್ಯ ತೆರಿಗೆ ಆಯುಕ್ತ ಇರ್ಷಾದ್‌ ಉಲ್‌ ಖಾನ್‌ ಲವ್‌ ಜೆಹಾದ್‌ಗೆ ಕುಮ್ಮಕ್ಕು ನೀಡಿರುವ ವಿರುದ್ಧ ಪುತ್ತೂರು ಗಾಂಧಿ ಕಟ್ಟೆಯ ಬಳಿ ವಿಶ್ವ ಹಿಂದೂ ಪರಿಷದ್‌ ಮತ್ತು ಬಜರಂಗ ದಳದ ವತಿಯಿಂದ ಹಮ್ಮಿಕೊಂಡ ಬೃಹತ್‌ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮೂರು ತಿಂಗಳ ಹಿಂದೆ ಕಥುವಾದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಾಗ ಬೀದಿಗಿಳಿದು ಪ್ರತಿಭಟನೆ ನಡೆಸಿದವರೆಲ್ಲ ಈಗ ಮೌನ ವಹಿಸಿದ್ದಾರೆ. ಹಿಂದೂ ಸಮಾಜದ ಮಾನ, ಸಂಸ್ಕೃತಿ ನಾಶ ಮಾಡಲು ವ್ಯವಸ್ಥಿತ ಪಿತೂಪಿ ನಡೆಯುತ್ತಿದ್ದು, ಇದಕ್ಕೆ ಉತ್ತರ ಕೊಡಲು ನಾವು ಸಿದ್ಧರಿದ್ದೇವೆ ಎಂದರು.

Advertisement

ಗಲ್ಲಿಗೇರಿಸಿ
ಅತ್ಯಾಚಾರಿಗಳನ್ನು ನೇಣಿಗೇರಿಸುವ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು, ಈ ಪ್ರಕರಣದಲ್ಲೂ ಆರೋಪಿಯನ್ನು ತತ್‌ಕ್ಷಣ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ದೇಶಾದ್ಯಂತ ಲವ್‌ ಜೆಹಾದ್‌ ಪ್ರಕರಣಗಳು ನಡೆಯುತ್ತಿದ್ದು, ಕಲಬುರಗಿಯ ವಾಣಿಜ್ಯ ತೆರಿಗೆ ಆಯುಕ್ತರೂ ಕುಮ್ಮಕ್ಕು ನೀಡಿರುವುದು ಆತಂಕಕಾರಿ ಬೆಳವಣಿಗೆ. ಕೇರಳದಲ್ಲಿ ಲವ್‌ ಜೆಹಾದ್‌ ಎಗ್ಗಿಲ್ಲದೆ ನಡೆಯುತ್ತಿತ್ತು. ಈಗ ಕರ್ನಾಟಕಕ್ಕೂ ಅದರ ಕಬಂಧ ಬಾಹುಗಳು ವ್ಯಾಪಿಸಿವೆ. ಕಠಿನ ಕ್ರಮ ಕೈಗೊಳ್ಳಲು ಸರಕಾರ ಹಾಗೂ ಇಲಾಖೆಗಳಿಗೆ ಸಾಧ್ಯವಿಲ್ಲದಿದ್ದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಿದ್ಧರಿದ್ದಾರೆ ಎಂದು ಎಚ್ಚರಿಸಿದರು.

ನೀಚ ಪ್ರವೃತ್ತಿ
ಸಂಸ್ಕಾರ ಭಾರತೀ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಮಾತನಾಡಿ, ಕಾಮಾಂಧರು ಹಸುಳೆಯ ಮೇಲೂ ಅತ್ಯಾಚಾರ ಮಾಡುವ ನೀಚ ಪ್ರವೃತ್ತಿಗೆ ಇಳಿದಿದ್ದಾರೆ. ಕಾಶ್ಮೀರ ಅತ್ಯಾಚಾರದ ವಿರುದ್ಧ ಸೊಲ್ಲೆತ್ತಿದ ರಾಹುಲ್‌ ಗಾಂಧಿ ಮತ್ತು ಕ್ಯಾಂಡಲ್‌ ಮೆರವಣಿಗೆ ಮಾಡಿರುವ ಕಾರ್ಪೋರೇಟರ್‌ ಪ್ರತಿಭಾ ಕುಳಾಯಿ ಅವರಿಗೆ ಮಧ್ಯಪ್ರದೇಶದ ಘಟನೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕ ಶ್ರೀಧರ್‌ ತೆಂಕಿಲ, ಪುತ್ತೂರು ಪ್ರಖಂಡ ಸಂಚಾಲಕ ನಿತಿನ್‌ ನಿಡ್ಪಳ್ಳಿ, ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಸಚಿನ್‌ ರೈ ಪಾಪೆಮಜಲು, ಮಾತೃ ಮಂಡಳಿಯ ಪ್ರಮುಖರಾದ ಪ್ರೇಮಲತಾ ರಾವ್‌, ಮೋಹಿನಿ ದಿವಾಕರ್‌, ಜಯಂತಿ ನಾಯಕ್‌, ಜ್ಯೋತಿ ನಾಯಕ್‌, ಅರ್ಪಣಾ ಶಿವಾನಂದ, ಸಂಘಟನೆಗಳ ಪ್ರಮುಖರಾದ ಹರೀಶ್‌ ದೋಳ್ಪಾಡಿ, ಸುರೇಶ್‌ ಆಳ್ವ ಉಪಸ್ಥಿತರಿದ್ದರು. ವಿಹಿಂಪ ಪುತ್ತೂರು ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ಸ್ವಾಗತಿಸಿ, ಬಜರಂಗದಳ ನಗರ ಸತ್ಸಂಗ ಪ್ರಮುಖ್‌ ವಿಶಾಖ್‌ ರೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next