ಹಾವೇರಿ: ಪಶು ವೈದ್ಯ ಸೇವೆ ಒಳ್ಳೆಯ ವೃತ್ತಿ ಹಾಗೂ ಪುಣ್ಯದ ಕೆಲಸವೂ ಆಗಿದೆ. ಮಾತು ಬಾರದ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ. “ವೈದ್ಯೋ ನಾರಾಯಣೋ ಹರಿ’ ಎಂಬ ಮಾತು ಪಶು ವೈದ್ಯರಿಗೆ ಹೆಚ್ಚು ಸೂಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧುವಾರ ಜಿಲ್ಲಾ ಪಂಚಾಯತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಹಾವೇರಿ ಶಾಖೆ ಸಹಯೋಗದಲ್ಲಿ ನಡೆದ ವಿಶ್ವ ಪಶು ವೈದ್ಯಕೀಯ ದಿನಾಚರಣೆ ಹಾಗೂ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಜಿಲ್ಲೆಯ ಪಶು ವೈದ್ಯರ ತಾಂತ್ರಿಕ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನುವಾರುಗಳ ಚಿಕಿತ್ಸೆಗೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಪಶು ವೈದ್ಯರು ಸಹ ಪಶು ವೈದ್ಯ ಸೇವೆ ಉನ್ನತಿಯ ಬಗ್ಗೆ ಆಲೋಚಿಸಬೇಕು. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು. ಇಂತಹ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಮೂಲಕ ಪಶು ವೈದ್ಯಕೀಯ ಸೇವೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. 1863ರಲ್ಲಿ ಸಣ್ಣದಾಗಿ ಆರಂಭವಾದ ಪಶು ವೈದ್ಯಕೀಯ ದಿನಾಚರಣೆ ಇಂದು ದೊಡ್ಡವಾಗಿ ಬೆಳೆದಿರುವುದು ಸಂತಸದ ಸಂಗತಿ. ಜಿಲ್ಲಾ ಪಶು ವೈದ್ಯರ ಸಂಘಕ್ಕೆ ಪಶು ಆಸ್ಪತ್ರೆ ಆವರಣದ ಜಾಗೆಯ ಬದಲಾಗಿ ಬೇರೆ ಕಡೆ ಜಾಗೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಮಾತನಾಡಿ, ಪಶು ವೈದ್ಯಕೀಯ ಸೇವೆಯಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸಿಕೊಳ್ಳಬೇಕು. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನುದಾನ ಬಳಕೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸಬೇಕು. ಕೋವಿಡ್ ಸಮಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಪಶು ವೈದ್ಯಾಧಿಕಾರಿ ಡಾ|ಎನ್.ಬಿ.ಅಂಗಡಿ ಪಶು ವೈದ್ಯಕೀಯ ಸೇವೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ|ಎಸ್. ರವಿಕುಮಾರ ಅವರು ಕೋಳಿ ಉದ್ಯಮದಲ್ಲಿ ಪ್ರಸ್ತುತ ಪ್ರಗತಿಗಳು ಹಾಗೂ ಡಾ|ಕೃಷ್ಣರೆಡ್ಡಿ ಅವರು ಪಶು ವೈದ್ಯಕೀಯ ಅಭ್ಯಾಸದಲ್ಲಿ ಹೋಮಿಯೋಪತಿ ಉತ್ಪನ್ನಗಳ ಕ್ರಿಯೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಪಶು ವೈದ್ಯಕೀಯ ಪಾಲಿಟೆಕ್ನಿಕ್ ಉಪ ನಿರ್ದೇಶಕ ಚಿದಾನಂದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ|ನರೇಂದ್ರನಾಥ ಚೌಡಾಳ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ|ರಾಜೀವ ಕೂಲೇರ ಇದ್ದರು.
ಪಶು ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ|ಪರಮೇಶ್ವರ ಹುಬ್ಬಳ್ಳಿ ಸ್ವಾಗತಿಸಿದರು. ಜಾನುವಾರುಗಳ ಚಿಕಿತ್ಸೆಗೆ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಪಶು ವೈದ್ಯರು ಸಹ ಪಶು ವೈದ್ಯ ಸೇವೆ ಉನ್ನತಿಯ ಬಗ್ಗೆ ಆಲೋಚಿಸಬೇಕು. ಪ್ರಾಣಿಗಳನ್ನು ಪ್ರೀತಿಯಿಂದ ಕಾಣಬೇಕು. ಇಂತಹ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಮೂಲಕ ಪಶು ವೈದ್ಯಕೀಯ ಸೇವೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು.
-ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ