ಬಂಟ್ವಾಳ: ಪಶು ಸಂಗೋಪನ ಇಲಾಖೆಯಿಂದ ನೀಡಲಾಗುವ ಪಶುಭಾಗ್ಯ ಸಹಾಯಧನದ ಚೆಕ್ 24 ಲಕ್ಷ ರೂ.ನ್ನು ಅ. 28ರಂದು ಬಿ.ಸಿ.ರೋಡ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ 92 ಮಂದಿ ಫಲಾನುಭವಿಗಳಿಗೆ ವಿತರಿಸಿದರು.
ರಾಜ್ಯ ಸರಕಾರವು ರೈತಾಪಿ ವರ್ಗದ ಹಿತಚಿಂತನೆಯಿಂದ ಜಾನುವಾರು, ಕೋಳಿ, ಆಡು ಸಹಿತ ಇತರ ಉದ್ದೇಶದ ಸಾಕುಪ್ರಾಣಿಗಳ ನಿರ್ವಹಣೆಗಾಗಿ ನೀಡುವ ಇಂತಹ ಸಹಾಯಧನವು ರೈತರಿಗೆ ಇನ್ನಷ್ಟು ಪ್ರೇರಣೆಗಾಗಿ, ಸಾಕು ಪ್ರಾಣಿಗಳನ್ನು ಸಾಕಲು ಪ್ರೋತ್ಸಾಹಿಸುವ ಉದ್ದೇಶದಿಂದ ನೀಡಲಾಗುತ್ತಿದೆ ಎಂದರು.
ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಯೋಜನೆಯನ್ನು ಸರಿಯಾಗಿ ಅನುಷ್ಠಾನಿಸಿ, ಮುಂದಿನ ವರ್ಷಕ್ಕೆ ಇನ್ನಷ್ಟು ಹೆಚ್ಚಿನ ಫಲಾನುಭವಿಗಳು ಇದರ ಸದುಪಯೋಗ ಪಡೆಯಬೇಕು. ಜನರಿಗೆ ಜಾನುವಾರು, ಕೋಳಿ, ಆಡು ಸಾಕಲು ಇನ್ನಷ್ಟು ಪ್ರೇರಣೆ ಆಗಬೇಕು. ಜನರು ಇದರಿಂದ ನಷ್ಟವನ್ನು ಹೊಂದಬಾರದು ಎಂದು ಸಹಾಯಧನ ವಿತರಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯ ಹೈದರ್ ಕೈರಂಗಳ, ಮಾಜಿ ಸದಸ್ಯ ಎಫ್ರೇಂ ಸಿಕ್ವೇರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಪಶು ಸಂಗೋಪನ ಇಲಾಖೆಯ ಶ್ರೀಮಂದರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಪಶುಸಂಗೋಪನ ಇಲಾಖೆಯ ಉಪ ನಿರ್ದೇಶಕ ಡಾ| ಹೆನ್ರಿ ಲಸ್ರಾದೋ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಡಾ| ಪ್ರಸನ್ನ ಕುಮಾರ್ ಟಿ.ಜಿ. ವಂದಿಸಿದರು. ಪಶುವೈದ್ಯಾಧಿಕಾರಿ ಡಾ| ರವಿ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.