Advertisement

ಉಪಯೋಗಕ್ಕೆ ಬಾರದ ಪಶು ಆಸ್ಪತ್ರೆ

01:15 PM May 21, 2018 | Team Udayavani |

ನಿಡ್ಪಳ್ಳಿ : ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿರುವ ಪಶುವೈದ್ಯ ಆಸ್ಪತ್ರೆ ಹೈನುಗಾರರ ಬಳಕೆಗೆ ಸಮರ್ಪಕವಾಗಿ ಸಿಗುತ್ತಿಲ್ಲ. ಇಲ್ಲಿ ಸುಸಜ್ಜಿತ ಕಟ್ಟಡವಿದೆ. ಔಷಧಗಳ ಕೊರತೆಯೂ ಅಷ್ಟೇನೂ ಇಲ್ಲ. ಆದರೆ. ಖಾಯಂ ನೆಲೆಯಲ್ಲಿ ವೈದ್ಯರು ಹಾಗೂ ಸಿಬಂದಿ ಕೊರತೆಯೇ ಇಲ್ಲಿನ ಪ್ರಮುಖ ಸಮಸ್ಯೆ. ಇಲ್ಲಿ ವೈದ್ಯರಾಗಿದ್ದ ಡಾ| ಪ್ರಭಾಕರ ನಾಯಕ್‌ ಅವರ ನಿಧನದ ಬಳಿಕ ಇಲ್ಲಿಗೆ ಬೇರೆ ವೈದ್ಯರ ನೇಮಕವಾಗದೆ ಹೈನುಗಾರರಿಗೆ ತೊಂದರೆಯಾಗಿದೆ. ಈಗ ಪೆರ್ಲಂಪಾಡಿ ಅಸ್ಪತ್ರೆಯ ವೈದ್ಯರು ವಾರದಲ್ಲಿ ಮೂರು ದಿವಸ ಮಾತ್ರ ನಿಯೋಜನೆ ಮೇರೆಗೆ ಕರ್ತವ್ಯ ಮಾಡುತ್ತಿದ್ದಾರೆ. ಡಿ ಗ್ರೂಪ್‌ನ ಮೂವರು ನೌಕರರು ಇರಬೇಕಿತ್ತು. ಆದರೆ, ಗುತ್ತಿಗೆ ಆಧಾರದಲ್ಲಿ ಒಬ್ಬ ಸಿಬಂದಿ ಮಾತ್ರವಿದ್ದಾರೆ. ಜಾನುವಾರು ಅಧಿಕಾರಿ ಹುದ್ದೆಯಲ್ಲಿ ಒಬ್ಬರು ಖಾಯಂ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಪಾಣಾಜೆ, ಬೆಟ್ಟಂಪಾಡಿ, ನಿಡ್ಪಳ್ಳಿ , ಇರ್ದೆ ಗ್ರಾಮದ ಜನರಿಗೆ ಮಾತ್ರವಲ್ಲ ಕೇರಳ ಗಡಿ ಪ್ರದೇಶದ ಜನರಿಗೂ ಈ ಅಸ್ಪತ್ರೆ ಅನುಕೂಲವಾಗಿದೆ. ಕೃಷಿಯೇ ಪ್ರಧಾನವಾಗಿರುವ ಈ ಭಾಗದ ಗ್ರಾಮೀಣ ಜನರು ಹೈನುಗಾರಿಕೆಯನ್ನು ಪರ್ಯಾಯ ಉದ್ಯೋಗವಾಗಿ ಮಾಡಿಕೊಂಡಿದ್ದಾರೆ. ಸ್ಥಳೀಯವಾಗಿ ಹಾಲಿನ ಬೇಡಿಕೆಯನ್ನು ಪೂರೈಸುವ ಜತೆಗೆ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಹಾಲು ಹಾಕುತ್ತಿದ್ದಾರೆ. ಆದರೆ ಜಾನುವಾರುಗಳಿಗೆ ಕಾಯಿಲೆ ಬಂದಾಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ದನ ಸಾಕಲೂ ಜನರು ಹಿಂದೇಟು ಹಾಕುತ್ತಾರೆ. ಕಾಯಿಲೆ ಬಂದಾಗ ದೂರದ ಆಸ್ಪತ್ರೆಯನ್ನೇ  ವಲಂಬಿಸಬೇಕಾಗಿದೆ. 

ಸಿಬಂದಿ ಕೊರತೆ ಇಲ್ಲಿ ಮಾತ್ರ ಅಲ್ಲ, ತಾಲೂಕಿನ ಎಲ್ಲ ಆಸ್ಪತ್ರೆಗಳಲ್ಲಿಯೂ ಇದೆ. ಇಡೀ ತಾಲೂಕಿನಲ್ಲಿ ಒಂದು ಹುದ್ದೆ ಮಾತ್ರ ಖಾಯಂ ನೆಲೆಯಲ್ಲಿ ಇದ್ದು, ಉಳಿದ ಎಲ್ಲ ಕಡೆಗಳಲ್ಲೂ ಗುತ್ತಿಗೆ ಆಧಾರದಲ್ಲಿ ಸಿಬಂದಿ ಸೇವೆ ಮಾಡುತ್ತಿದ್ದಾರೆ. ಪಶು ಸಂಗೋಪನ ಇಲಾಖೆಯ ಸಮಸ್ಯೆಗಳನ್ನು ನಿವಾರಿಸಲು ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎನ್ನುವುದು ಜನರ ಅಭಿಪ್ರಾಯ. 

ಸಿಬಂದಿ ಕೊರತೆಯಿಂದ ಸೇವೆಗೆ ಅಡ್ಡಿ
ವೈದ್ಯರು ಹಾಗೂ ಸಿಬಂದಿ ಕೊರತೆಯಿಂದ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ನೀಡಲು ಕಷ್ಟವಾಗುತ್ತಿದೆ. ಒಂದು ಹುದ್ದೆ  ಮಾತ್ರ ಖಾಯಂ  ಇದ್ದು, ಇಲಾಖೆಯ ವತಿಯಿಂದ ನಡೆಯುವ ಕಾರ್ಯಕ್ರಮಗಳನ್ನೂ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಇಲಾಖೆಗೆ ರಿಪೋರ್ಟ್‌ ನೀಡಬೇಕು. ಬೇಕಾದ ಸಿಬಂದಿ ಇದ್ದರೆ ಇಲ್ಲಿ ಜನರಿಗೆ ಇನ್ನಷ್ಟು ಉತ್ತಮ ಸೇವೆ ನೀಡಬಹುದು. ಇಡೀ ತಾಲೂಕಿನ ಬಗ್ಗೆ ಅವಲೋಕಿಸಿದರೆ ಕೇವಲ ಶೇ. 40ರಷ್ಟು ಸಿಬಂದಿ ಇದ್ದು, ಶೇ. 60 ಕೊರತೆ ಇದೆ. ಸರಕಾರ ಹಾಗೂ ಇಲಾಖೆ ತತ್‌ಕ್ಷಣ ಗಮನ ಹರಿಸಿದರೆ ಒಳ್ಳೆಯದು. 
– ಪುಷ್ಪರಾಜ್‌ ಶೆಟ್ಟಿ,
ಜಾನುವಾರು ಅಧಿಕಾರಿ, ಪಾಣಾಜೆ ಪಶು ಆಸ್ಪತ್ರೆ

 ವೈದ್ಯರು ಪ್ರತಿ ದಿನ ಸಿಗಲಿ
ಖಾಯಂ ವೈದ್ಯರಿಲ್ಲದೆ ಕೃಷಿಕರಿಗೆ ಬಹಳ ಸಮಸ್ಯೆಯಾಗುತ್ತಿದೆ. ಹೈನುಗಾರಿಕೆಗೆ ಪ್ರೋತ್ಸಾಹ ಸಿಗಬೇಕಾದರೆ ಸರಿಯಾದ ಸೌಲಭ್ಯ ಇರಬೇಕು. ವೈದ್ಯರು ನಮಗೆ ಪ್ರತಿದಿನ ಸಿಗುವಂತಾಗಬೇಕು. 
– ಚಂದ್ರಶೇಖರ ಪ್ರಭು,
   ನಿಡ್ಪಳ್ಳಿ , ಹೈನುಗಾರರು

Advertisement

 ಗ್ರಾಮಸಭೆಯಲ್ಲಿ ಚರ್ಚೆ
ಪಾಣಾಜೆ ಪಶು ಅಸ್ಪತ್ರೆಯಲ್ಲಿ ಕಾಯಂ ವೈದ್ಯರು ಮತ್ತು ಸಿಬಂದಿ ಕೊರತೆ ಹಿಂದಿನಿಂದಲೂ ಇದೆ. ಇದರಿಂದ ಕೃಷಿಕರಿಗೆ ಬಹಳ ತೊಂದರೆಯಾಗಿದೆ. ಇದರ ಬಗ್ಗೆ ಹಿಂದೊಮ್ಮೆ ಪಂಚಾಯತ್‌ನಿಂದ ಬೇಡಿಕೆ ಸಲ್ಲಿಸಿದ್ದೆವು. ಆದರೆ ಸ್ಪಂದನೆ ಸಿಕ್ಕಿಲ್ಲ. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ,
ಇಲಾಖೆ ಮತ್ತು ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು.
 - ನಾರಾಯಣ ಪೂಜಾರಿ
    ಅಧ್ಯಕ್ಷರು ಗ್ರಾ.ಪಂ., ಪಾಣಾಜೆ

 ಗಂಗಾಧರ ನಿಡ್ಪಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next