Advertisement

ಪಶು ಆಸ್ಪತ್ರೆಗಳಿಗೆ ಬೇಕಿದೆ ಚಿಕಿತ್ಸೆ

04:07 PM Sep 24, 2019 | Suhan S |

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಾಂತ ಇರುವ ನಾಲ್ಕು ಪಶು ಆಸ್ಪತ್ರೆ ಮತ್ತು 8 ಹಳ್ಳಿಗಳಲ್ಲಿನ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು, ಸಿಬ್ಬಂದಿ ಸೇರಿ 32 ಹುದ್ದೆ ಖಾಲಿ ಇದ್ದರೆ, ಇನ್ನೊಂದೆಡೆ ಹಳ್ಳಿಗಳಲ್ಲಿನ ಪಶು ಚಿಕಿತ್ಸಾಲಯ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿ ನಲುಗುತ್ತಿವೆ.

Advertisement

ತಾಲೂಕಿನಲ್ಲಿ ದೇವದುರ್ಗ ಪಟ್ಟಣ ಸೇರಿ ಜಾಲಹಳ್ಳಿ, ಗಬ್ಬೂರು, ಅರಕೇರಾ ಸೇರಿದಂತೆ ನಾಲ್ಕು ಪಶು ಆಸ್ಪತ್ರೆಗಳಿವೆ. ಇನ್ನು ಹಿರೇಬೂದೂರು, ಆಲ್ಕೋಡ, ಗಾಣದಾಳ, ಮಸರಕಲ್‌, ಕ್ಯಾದಿಗೇರಾ, ನಾಗಡದಿನ್ನಿ, ಜಾಡಲದಿನ್ನಿ, ಗಲಗ ಸೇರಿ 8 ಪಶು ಚಿಕಿತ್ಸಾಲಯ ಕೇಂದ್ರಗಳಿವೆ. ಒಟ್ಟು 186 ಹಳ್ಳಿಗಳಿವೆ.

ಹುದ್ದೆ ಖಾಲಿ:  ತಾಲೂಕಿನಲ್ಲಿ 4 ಪಶು ಆಸ್ಪತ್ರೆ, 8 ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರು ಸೇರಿ ಒಟ್ಟು 55 ಹುದ್ದೆಗಳು ಮಂಜೂರಾಗಿವೆ. ಕೇವಲ 5 ಜನ ವೈದ್ಯರು ಸೇರಿ 23 ಜನ ಮಾತ್ರ ಇದ್ದಾರೆ. 7 ವೈದ್ಯರು, 20 ಡಿ ಗ್ರೂಪ್‌, 1 ಡ್ರೈವರ್‌, 4 ಜನ ಪಶು ಪರೀಕ್ಷಕರ ಹುದ್ದೆಗಳು ಖಾಲಿ ಇವೆ. ಇನ್ನು ಇರುವ ವೈದ್ಯರೇ 186 ಹಳ್ಳಿಗಳಲ್ಲಿನ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. 8 ಪಶು ಚಿಕಿತ್ಸಾಲಯಗಳಲ್ಲಿ ತಲಾ ಎರಡು ಪಶು ಚಿಕಿತ್ಸಾಲಯಗಳಿಗೆ ಒಬ್ಬ ವೈದ್ಯರನ್ನು ನೇಮಿಸಲಾಗಿದೆ.

ಒಂದು ಪಶು ಚಿಕಿತ್ಸಾಲಯ ವ್ಯಾಪ್ತಿಗೆ 20 ಹಳ್ಳಿಗಳು ಬರುತ್ತವೆ. ಜಿಲ್ಲೆಯವರೇ ಆದ ಸಿಂಧನೂರಿನ ಶಾಸಕ ವೆಂಕಟರಾವ್‌ ನಾಡಗೌಡರೇ ಪಶು ಸಂಗೋಪನಾ ಖಾತೆ ಸಚಿವರಾಗಿದ್ದಾಗ ಹುದ್ದೆ ಭರ್ತಿಗೆ ಕ್ರಮ ವಹಿಸಲಿಲ್ಲ. ಈಗಿನ ಬಿಜೆಪಿ ಸರ್ಕಾರ ಕೂಡ ಹುದ್ದೆ ಭರ್ತಿಗೆ ಮುಂದಾಗದೇ ಇರುವ ಕಾರಣ ಗ್ರಾಮೀಣ ರೈತರು ಜಾನುವಾರುಗಳ ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರೂಕಾಳಜಿ ವಹಿಸುತ್ತಿಲ್ಲ ಎಂದು ರೈತರು ದೂರಿದ್ದಾರೆ.

ಕಟ್ಟಡಗಳು ಶಿಥಿಲ: ಗ್ರಾಮೀಣ ಪ್ರದೇಶದ 8 ಪಶು ಚಿಕಿತ್ಸಾಲಯಗಳಲ್ಲಿ ಗಲಗ, ನಾಗಡದಿನ್ನಿ, ಗಾಣಧಾಳ ಕೇಂದ್ರಗಳ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಬಾಡಿಗೆ ಕಟ್ಟಡದಲ್ಲಿ ಚಿಕಿತ್ಸಾಲಯ ನಡೆಸಲಾಗುತ್ತಿದೆ.

Advertisement

ಈ ಕಟ್ಟಡಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನಲಾಗಿದೆ. ಉಳಿದ 5 ಪಶು ಚಿಕಿತ್ಸಾಲಯಗಳು ಅಲ್ಪಸ್ವಲ್ಪ ಉತ್ತಮವಾಗಿದ್ದು, ಅವುಗಳ ನಿರ್ವಹಣೆಗೆ ಅನುದಾನ ಅವಶ್ಯವಿದೆ. ಅನುದಾನ ಮಂಜೂರು: ಸಮೀಪದ ಮಸರಕಲ್‌, ಹಿರೇಬೂದೂರು ಪಶು ಚಿಕಿತ್ಸಾಲಯಗಳಿಗೆ ನೂತನ ಕಟ್ಟಡ ನಿರ್ಮಿಸಲು ಈಗಾಗಲೇ 38 ಲಕ್ಷ ಅನುದಾನ ಮಂಜೂರಾಗಿ ಆರೇಳು ತಿಂಗಳಾಗಿದೆ. ಕಂದಾಯ ಇಲಾಖೆಯಿಂದ ನಿವೇಶನ ಲಭ್ಯವಿದ್ದು, ಜಿಲ್ಲಾಧಿಕಾರಿಗಳ ಅನುಮೋದನೆ ಬಾಕಿ ಇದೆ. ಜಿಲ್ಲಾ ಮಟ್ಟದಲ್ಲೆ ಟೆಂಡರ್‌ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

20 ಪಶು ಆಸ್ಪತ್ರೆ ಅಗತ್ಯ: ಪಟ್ಟಣ ಸೇರಿ ತಾಲೂಕಿನ್ಯಾದಂತ 20 ಪಶು ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳ ಅವಶ್ಯ ಇದೆ. ಇದೀಗ 12 ಮಾತ್ರ ಇವೆ. ಹೊಸದಾಗಿ 10 ಆಸ್ಪತ್ರೆಗಳ ಬೇಡಿಕೆಗಾಗಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. ನಕಲಿ ವೈದ್ಯರ ಹಾವಳಿ: ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ನಕಲಿ ವೈದ್ಯರ ಹಾವಳಿ ಹೆಚ್ಚಿದೆ. ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದ ಕುರಿ, ಮೇಕೆಗಳು ಮೃತಪಟ್ಟ ಘಟನೆಗಳು ನಡೆದಿವೆ. ಇಂತಹ ದುರಂತ ತಡೆಗೆ ಸರ್ಕಾರ ಪಶು ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ಸಿಬ್ಬಂದಿ ನೇಮಿಸಬೇಕೆಂದು ಕೆಆರ್‌ಎಸ್‌ ಸಂಘಟನೆ ಅಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಆಗ್ರಹಿಸಿದ್ದಾರೆ.

 

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next