ಶಿರಹಟ್ಟಿ: ಇಲ್ಲಿರುವ ತಾಲೂಕು ಪಶು ಆಸ್ಪತ್ರೆಯಲ್ಲಿ ಇರಬೇಕಾದ ಮೂಲಸೌಕರ್ಯಗಳು ಇಲ್ಲದೇ ಈ ಭಾಗದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದಂತಾಗಿದೆ.
ಇಲ್ಲಿ ಔಷಧಾಲಯ ಇಲ್ಲ. ಸೂಕ್ತ ಸಿಬ್ಬಂದಿಗಳಿಲ್ಲ. ಅತ್ಯಾಧುನಿಕ ಯಂತ್ರಗಳಿಲ್ಲ ಒಟ್ಟಿನಲ್ಲಿ ಈ ಕೇಂದ್ರ ಹಾಳು ಕೊಂಪೆಯಂತೆ ಕಂಡು ಬರುತ್ತಿದೆ.
ಔಷಧಾಲಯದ ಡಿಪೋ ಇಲ್ಲ: ಈ ಕೇಂದ್ರದಲ್ಲಿ ಇರಬೇಕಾದ ಔಷಧಾಲಯ ಡಿಪೋ ಬೇರೆ ಕಡೆ ಇರುವುದರಿಂದ ಔಷಧಗಳು ಸೂಕ್ತ ಸಮಯದಲ್ಲಿ ದೊರಕದೇ ಸಾರ್ವಜನಿಕರು ಪಶು ಆಸ್ಪತ್ರೆಗೆ ಮತ್ತು ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಸಿಬ್ಬಂದಿ ಕೊರತೆ: ತಾಲೂಕಿನ ಕಡಕೋಳ.ಯಳವತ್ತಿ, ಶಿಗ್ಲಿ, ಬೆಳ್ಳಟ್ಟಿ, ಬನ್ನಿಕೊಪ್ಪ ಹೆಬ್ಟಾಳ, ಮಾಗಡಿ ಗ್ರಾಮಗಳಲ್ಲಿರುವ ಪಶು ಚಿಕಿತ್ಸಾಲಯಗಳಿಗೆ ವೈದ್ಯರೇ ಇಲ್ಲ. ಜತೆಗೆ 6 ವರ್ಷಗಳಿಂದ ಯಾವೊಬ್ಬ ಸಿಬ್ಬಂದಿಗಳಿಲ್ಲದೇ ಸದಾ ಬೀಗ ಹಾಕಿದ ಸ್ಥಿತಿಯಲ್ಲೇ ಇವೆ. ಶಿರಹಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿನ ಪಶು ಆಸ್ಪತ್ರೆಗಳಲ್ಲಿ 2 ಸಹಾಯಕ ನಿರ್ದೇಶಕ ಹುದ್ದೆ ಖಾಲಿ ಇವೆ. 12 ಜನ ಪಶು ವೈದ್ಯಾಧಿಕಾರಿಗಳಲ್ಲಿ ಇಬ್ಬರು, 12 ಜನ ಪಶು ವೈದ್ಯಕೀಯ ಪರೀಕ್ಷಕರಲ್ಲಿ ಇಬ್ಬರು, 4 ಜನ ಪಶು ವೈದ್ಯಕೀಯ ಸಹಾಯಕಲ್ಲಿ ಇಬ್ಬರು ಇದ್ದಾರೆ.
ತಾಲೂಕು ಆಸ್ಪತ್ರೆಯಲ್ಲಿಯೇ ಕಸ ಗೂಡಿಸುವವರಿಲ್ಲ. ಇನ್ನು ತಾಲೂಕಿನ ಪಶು ಆಸ್ಪತ್ರೆಗಳಲ್ಲಿಯ ಸ್ಥಿತಿ ಏನಾಗಿರಬಾರದು ಎನ್ನುವುದು ಶೋಚನೀಯ. ಆಸ್ಪತ್ರೆ ಶುಚಿತ್ವ ಇಲ್ಲದೇ ಗಬ್ಬು ನಾರುತ್ತಿದೆ.
ಹೈನುಗಾರಿಕೆಗೆ ಹಿನ್ನಡೆ: 2011ರಲ್ಲಿ ಜಾನುವಾರು ಗಣತಿ ಪ್ರಕಾರ ತಾಲೂಕಿನಲ್ಲಿ 14267 ದನಗಳು, 9940 ಎಮ್ಮೆಗಳು, 60223 ಕುರಿಗಳು, 17869 ಆಡುಗಳಿದ್ದು ಇವುಗಳ ಆರೋಗ್ಯ ತಪಾಸಣೆಗೆ ಸಿಬ್ಬಂದಿಗಳ ಕೊರತೆ ಇದೆ. ಇದರಿಂದಾಗಿ ಅನೇಕರು ಹೈನುಗಾರಿಕೆಯನ್ನು ಕೈಬಿಟ್ಟು ಬೇರೆ ಉದ್ಯೋಗದೆಡೆಗೆ ಗಮನ ಹರಿಸುತ್ತಿರುವುದು ಬೇಸರದ ಸಂಗತಿ. ಜತೆಗೆ ಸರಕಾರ ಕೊಟ್ಟ ಅನುದಾನವೂ ಸದ್ಭಳಕೆಯಾಗುತ್ತಿಲ್ಲ.
•ಪ್ರಕಾಶ.ಶಿ.ಮೇಟಿ