ಧಾರವಾಡ: ವೃಂದ ಮತ್ತು ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಠಾವಧಿ ಧರಣಿ ಆರಂಭಿಸಲಾಗಿದೆ.
ಕರ್ನಾಟಕ ಪಶು ವೈದ್ಯಕೀಯ ಪರೀಕ್ಷಕರ ಸಂಘ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಹಾಯಕರ ಸಂಘಗಳ ಆಶ್ರಯದಲ್ಲಿ ಡಿಸಿ ಕಚೇರಿ ಎದುರು ಮಂಗಳವಾರದಿಂದ ಧರಣಿ ಕೈಗೊಳ್ಳಲಾಗಿದ್ದು, ಇದಕ್ಕೂ ಮುನ್ನ ನಗರದ ಪಶು ಆಸ್ಪತ್ರೆಯಿಂದ ಕೋರ್ಟ್ ವೃತ್ತ, ತಹಶೀಲ್ದಾರ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದರು.
ಪ್ರತಿಭಟನಾಕಾರರು ಮಾತನಾಡಿ, ಇದೇ ಕಾರಣಕ್ಕೆ ಏಪ್ರಿಲ್ ತಿಂಗಳಲ್ಲಿ ಲಸಿಕಾ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಆಗ ಸಚಿವರು ಶೀಘ್ರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದರು.
ಆದರೆ ತಿಂಗಳು ಕಳೆದರೂ ಭರವಸೆ ಈಡೇರದ ಕಾರಣ ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ರೈತರಿಗೆ ಆಗುವ ತೊಂದರೆಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು. ಡಾ| ಎಚ್.ಸಿ. ಪಾಟೀಲ, ಡಾ| ಮುತ್ತನಗೌಡ ಬಿರಾದಾರ, ಡಾ| ಉಮೇಶ ಕೊಂಡಿ, ಡಾ| ಯು. ಎಚ್. ತಿರ್ಲಾಪುರ, ಡಾ| ಎಚ್.ಆರ್. ಬಾಲನಗೌಡರ, ಡಾ| ಕೃಷ್ಣಪ್ಪ ರಾಠೊಡ,
ಡಾ| ರಮೇಶ ಹೆಬ್ಬಳ್ಳಿ, ಡಾ| ಅನಿಲ ಶೀಲವಂತಮಠ, ಡಾ| ಆನಂದ ಪಡಿಯಪ್ಪನವರ, ಅಶೋಕ ಕರ್ಕೊಳ್ಳಿ, ಮಾರ್ತಾಂಡಪ್ಪ ಕತ್ತಿ, ಪ್ರೇಮಾನಂದ ಶಿಂಧೆ, ಶಿವಕುಮಾರ ಗಾಂಜಿ, ಎಸ್.ಎಂ. ಓಂಕಾರಿ, ಎಸ್.ಎಂ. ಘಂಟಿ, ಎಸ್.ಎಂ.ಕರಡಿಗುಡ್ಡ, ಪಾರ್ಶ್ವನಾಥ ಹೊಸಮನಿ, ಭೀಮಶಂಕರ ಬೆಳ್ಳುಂಡಗಿ ಸೇರಿದಂತೆ ಎಲ್ಲ ತಾಲೂಕಿನ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.