Advertisement

ಹಿರಿಯ ಸಾಹಿತಿ ಡಾ.ಎಂ ಚಿದಾನಂದ ಮೂರ್ತಿ ನಿಧನ: ಗಣ್ಯಾತೀಗಣ್ಯರಿಂದ ಸಂತಾಪ ಸೂಚನೆ

10:01 AM Jan 12, 2020 | Mithun PG |

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ ಚಿದಾನಂದ ಮೂರ್ತಿ ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯಾತೀಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

ಕನ್ನಡಕ್ಕೆ ಮಿಡಿಯುತ್ತಿದ್ದ, ಲೇಖಕ, ಸಂಶೋಧಕ, ಚಿಂತಕ, ಇತಿಹಾಸಕಾರರಾಗಿದ್ದ ಚಿ.ಮೂ ಇನ್ನಿಲ್ಲದ ವಿಷಯ ನೋವಿನದ್ದು ಮತ್ತು ಅವರ ಸ್ಥಾನ ಅನನ್ಯ, ಯಾರೂ ತುಂಬಲಾಗದು. ಹಂಪಿಯ ಸ್ಮಾರಕಗಳನ್ನು ಉಳಿಸುವಲ್ಲಿ ಹಾಗೂ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗುವಲ್ಲಿ ಇವರ ಪ್ರಯತ್ನ ಸ್ಮರಣೀಯ. ಅವರಾತ್ಮಕ್ಕೆ ಶಾಂತಿ ದೊರಕಲಿ- ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ

ಹಿರಿಯ ಸಾಹಿತಿ,ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ನಿಧನದ ಸುದ್ದಿ ತಿಳಿದು ದು:ಖವಾಯಿತು. ಅವರ ಸಂಶೋಧನೆ ಮತ್ತು ಸಾಹಿತ್ಯದ‌ ಜೊತೆಯಲ್ಲಿ ಅವರ ನೇರ ನಡೆ-ನುಡಿ, ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು‌ ಮೀರಿದ ಸ್ನೇಹ ಶೀಲ ಗುಣವನ್ನೂ  ನಾಡು ಸದಾ ಸ್ಮರಿಸುತ್ತದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ನಾಡಿನ ಹಿರಿಯ ಸಾಹಿತಿ, ಇತಿಹಾಸಜ್ಞ, ಹೋರಾಟಗಾರ, ತನ್ನ ನಂಬಿಕೆಗಳ ಜೊತೆ ಎಂದೂ ರಾಜಿ ಮಾಡಿಕೊಳ್ಳದೇ ಬದುಕಿದ, ಅತ್ಯಂತ ಧ್ಯೆರ್ಯವಾಗಿ ಇತಿಹಾಸದ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತಾ ಬಂದ, ವಿಶೇಷವಾಗಿ ಹಂಪೆಯ ಜೊತೆ ಬಹಳ ಆಪ್ತತೆ ಬೆಳೆಸಿಕೊಂಡಿದ್ದ, ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಶ್ರೀ ಎಂ ಚಿದಾನಂದಮೂರ್ತಿಗಳು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ.

ನಾಡಿಗೆ ಅವರ ಸೇವೆ ಅನನ್ಯ. ಅವರ ಬದುಕು, ವ್ಯಕ್ತಿತ್ವ,  ವಿಚಾರ ನಮಗೆ ಎಂದೆಂದಿಗೂ ಸ್ಪೂರ್ತಿದಾಯಕ.  ರಾಷ್ಟ್ರ ಓರ್ವ ಮಹಾನ್ ಪರಿಚಾರಕನನ್ನು ಕಳೆದುಕೊಂಡಿದೆ. ಅತ್ಯಂತ ಸಜ್ಜನ ವ್ಯಕ್ತಿತ್ವದ ಚಿದಾನಂದಮೂರ್ತಿಗಳ ಆತ್ಮಕ್ಕೆ ಸದ್ಗತಿ ದೊರಕಲಿ – ಸಚಿವ  ಸುರೇಶ್ ಕುಮಾರ್

Advertisement

ಇತಿಹಾಸ ತಜ್ಞ, ಅಪ್ರತಿಮ ಸಂಶೋಧಕ, ಭಾಷಾಶಾಸ್ತ್ರಜ್ಞ ಹಾಗೂ ಸಾಹಿತಿಗಳಾದ ಶ್ರೀ. ಚಿದಾನಂದ ಮೂರ್ತಿ (ಚೀ.ಮೂ) ಅವರ ನಿಧನದಿಂದಾಗಿ ಕನ್ನಡ ನಾಡು ಬಡವಾಗಿದೆ.  ಅವರ ಆತ್ಮಕ್ಕೆ  ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು  ನೀಡಲೆಂದು  ಭಗವಂತನಲ್ಲಿ ಪ್ರಾರ್ಥಿಸುತ್ತೇನೆ-  ಸಚಿವ ಬಿ. ಶ್ರೀರಾಮುಲು

ಹಿರಿಯ ಸಂಶೋಧಕ,ಕನ್ನಡ ಗರುಡ ಡಾ. ಚಿದಾನಂದ ಮೂರ್ತಿ ಅವರ ನಿಧನದಿಂದ  ನಾಡು ಅಪರೂಪದ ವಿದ್ವಾಂಸರನ್ನು ಕಳೆದುಕೊಂಡಿದೆ.ಕನ್ನಡ ಶಕ್ತಿ ಕೇಂದ್ರ ಸ್ಥಾಪಿಸಿದ್ದ ‘ಚಿಮೂ’ಎಂದೇ ಖ್ಯಾತರಾಗಿದ್ದ  ಹಿರಿಯ ಜೀವ ನಾಡುನುಡಿಜಲಕ್ಕಾಗಿ  ಅಹರ್ನಿಶಿ ಶ್ರಮಿಸಿದ್ದರು. ಮೃತರ ಕುಟುಂಬ ಸದಸ್ಯರಿಗೆ,ಅವರ ಅಪಾರ ಅಭಿಮಾನಿಗಳಿಗೆ  ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು- ಮಾಜಿ ಮುಖ್ಯಮಂತ್ರಿ  ಹೆಚ್. ಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next