ಹೈದರಾಬಾದ್ : ಮೆಗಾಸ್ಟಾರ್ ಪ್ರಭಾಸ್ ಅವರ ಚಿಕ್ಕಪ್ಪ, ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ಉಪ್ಪಲಪತಿ ವೆಂಕಟ ಕೃಷ್ಣಂ ರಾಜು ಅವರು ಇಂದು (ರವಿವಾರ) ಹೈದರಾಬಾದ್ ನಲ್ಲಿ ನಿಧನಹೊಂದಿದರು.
ಅವರಿಗೆ 83 ವರ್ಷ ವಯಸ್ಸಾಗಿತ್ತು, ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದು ಇಂದು ಮುಂಜಾನೆ 3.25ಕ್ಕೆ ಕೊನೆಯುಸಿರೆಳೆದಿದ್ದಾರೆ.
ನಟ, ಪತ್ರಕರ್ತ, ಛಾಯಾಗ್ರಾಹಕ, ರಾಜಕಾರಣಿಯಾಗಿ ಕೃಷ್ಣಂರಾಜು ಜನಪ್ರಿಯರಾಗಿದ್ದರು. ಪತ್ನಿ, ಮೂವರು ಪುತ್ರಿಯರು, ಅಪಾರ ಸ್ನೇಹಿತರು ಹಾಗೂ ಬಂಧುಗಳನ್ನು ಅವರು ಅಗಲಿದ್ದಾರೆ.
ಕೃಷ್ಣಂರಾಜು ಅವರು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ, ಗ್ರಾಹಕ ಸೇವೆಗಳು, ಆಹಾರ ಮತ್ತು ಪಡಿತರ ವಿತರಣೆ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೊದಲ ನಟ ಎನ್ನುವುದು ವಿಶೇಷ.
ಕೃಷ್ಣಂ ರಾಜು ಅವರು ನಟ ಪ್ರಭಾಸ್ ಅವರ ಚಿಕ್ಕಪ್ಪ ಆಗಿದ್ದು, ತೆಲುಗಿನಲ್ಲಿ 190ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ, ಅಲ್ಲದೆ ಅತ್ಯುತ್ತಮ ತೆಲುಗು ನಟ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಅತ್ಯುತ್ತಮ ನಟನೆಗಾಗಿ ನಂದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಇದನ್ನೂ ಓದಿ : ಕರ್ತವ್ಯ ನಿರ್ವಹಣೆಯಲ್ಲಿ ಲೋಪ : ಪೊಲೀಸ್ ಸಿಬ್ಬಂದಿಗಳನ್ನೇ ಜೈಲಿಗೆ ಹಾಕಿದ ಪೊಲೀಸ್ ಅಧಿಕಾರಿ