Advertisement

ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

04:02 PM Sep 25, 2020 | Hari Prasad |

ಚೆನ್ನೈ: ಆ ಧ್ವನಿ ಬದುಕುಳಿಯಬೇಕೆಂದು ಕಳೆದ ಒಂದು ತಿಂಗಳುಗಳಿಂದ ಕೋಟ್ಯಂತರ ಸಂಗೀತ ಪ್ರೇಮಿಗಳು ನಿರಂತರವಾಗಿ ಪ್ರಾರ್ಥಿಸುತ್ತಲೇ ಇದ್ದರು. ಆ ಜೀವವೂ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯನ ಲೋಕದ ಮೇರು ಪ್ರತಿಭೆ ಎಸ್. ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Advertisement

ವಿವಿಧ ಭಾಷೆಯ ಸುಮಾರು ನಲವತ್ತು ಸಹಸ್ರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಆ ಕಂಠ ಕೋವಿಡ್ ಎಂಬ ಮಹಾಮಾರಿಯ ಕಪಿಮುಷ್ಠಿಗೆ ಸಿಲುಕಿ ವಿವಿಧ ರೀತಿಯ ನಳಿಕೆಗಳನ್ನು ತೂರಿಸಿಕೊಂಡು ಆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ನಿಶ್ಚೇತನವಾಗಿ ಮಲಗಿದ್ದರೆ, ಇತ್ತ ಅದನ್ನು ಊಹಿಸಿಕೊಳ್ಳಲೂ ಆಗದ ಸಂಕಟ ಆ ಧ್ವನಿಯನ್ನು ಹಾಗೂ ಸದಾ ನಗುಮೊಗದ, ಮಗು ಮನಸ್ಸಿನ ಆ ವ್ಯಕ್ತಿಯನ್ನು ಪ್ರೀತಿಸುವವರದ್ದಾಗಿತ್ತು.

ಆದರೆ, ಕಾಲನ ಕರೆಗೆ ಇದ್ಯಾವುದೂ ನಾಟಲೇ ಇಲ್ಲ. ‘ಕಣ್ಣಿಗೆ ಕಾಣದ ನಾಟಕಕಾರ’ ಈ ಜಗತ್ತಿನ ಜೊತೆಗಿನ ಅವರ ‘ಬಂಧನ’ನವನ್ನು ಕಳಚಿ SPB ಎಂಬ ಸ್ವರ ಮಾಂತ್ರಿಕನ ಪ್ರಾಣವನ್ನು ಕಸಿದುಕೊಂಡು ಹೋಗಿಯೇ ಬಿಟ್ಟ. ಅಲ್ಲಿಗೆ, ‘ಪ್ರೇಮದಾ ಕಾದಂಬರಿ ಬರೆದನು ಕಣ್ಣೀರಲಿ..’ ಎಂದು ಭಾವ ತುಂಬಿ ಹಾಡಿದಾತ ‘ಕಥೆಯು ಮುಗಿದೇ ಹೋದರೂ ಮುಗಿಯದಿರಲೀ ಬಂಧನ…’ ಎಂದು ಹೇಳಿ ಹೊರಟೇ ಬಿಟ್ಟಿದ್ದಾರೆ…! ಅವರನ್ನು ಪ್ರೀತಿಸುತ್ತಿದ್ದ ಅವರ ಧ್ವನಿಗೆ ಮಾರು ಹೋಗಿದ್ದ ಹೃದಯಗಳು ಮಾತ್ರ ಇಲ್ಲಿ ‘ಆದ್ರವಾಗಿವೆ’!

ಇದನ್ನೂ ಓದಿ: ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಹೌದು, ಶ್ರೀಪತಿ ಪಂಡಿತಾರಾದ್ಯಲು ಬಾಲಸುಬ್ರಹ್ಮಣ್ಯಂ, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಪಿ.ಬಿ. ಎಂಬ ಸ್ವರ ಮಾಂತ್ರಿಕ, ಗಾನ ಗಾರುಡಿ ಇನ್ನು ನೆನಪು ಮಾತ್ರ.

Advertisement

ಕೋವಿಡ್ 19 ಸೋಂಕಿನ ಕಾರಣದಿಂದ ವೈದ್ಯರ ಸಲಹೆ ಮೇರೆಗೆ ಆಗಸ್ಟ್ ಪ್ರಥಮ ವಾರದಲ್ಲಿ ಚೆನ್ನೈನ ಎಂ.ಜಿ.ಎಂ. ಹೆಲ್ತ್ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಎಸ್.ಪಿ.ಬಿ., ಗುಣಮುಖರಾಗಿ ಅಲ್ಲಿಂದ ಶೀಘ್ರವೇ ಮರಳುವ ವಿಶ್ವಾಸವನ್ನು ತನ್ನ ಕೊನೆಯ ವಿಡಿಯೋ ಸಂದೇಶದಲ್ಲಿ ಹಂಚಿಕೊಂಡಿದ್ದರು.

ಆದರೆ, ಆಸ್ಪತ್ರೆಗೆ ದಾಖಲಾಗಿದ್ದ ಎಸ್.ಪಿ.ಬಿ. ಆರೋಗ್ಯ ಸ್ಥಿತಿ ಇದ್ದಕ್ಕಿದ್ದಂತೆಯೇ ಬಿಗಡಾಯಿಸತೊಡಗಿತ್ತು. ತಕ್ಷಣವೇ ಅವರನ್ನು ವೆಂಟಿಲೇಟರ್ ಆಧಾರಿತ ತುರ್ತು ನಿಗಾ ಘಟಕಕ್ಕೆ ಸ್ಥಳಾಂತರಿಸಿ ವಿಶೇಷ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿತ್ತು.

ಇದನ್ನೂ ಓದಿ: ‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

ಇತ್ತ, ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಆತಂಕ ಮನೆಮಾಡತೊಡಗಿತ್ತು. ತಮ್ಮ ನೆಚ್ಚಿನ ಗಾಯಕ ಹೀಗೆ ಹಠಾತ್ತಾಗಿ ಗಂಭೀರ ಸ್ಥಿತಿಗೆ ಜಾರುವುದೆಂದರೆ ಅದನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲೇ ಅಭಿಮಾನಿಗಳೂ, ದಕ್ಷಿಣ ಭಾರತ ಚಿತ್ರರಂಗವೂ ಇರಲಿಲ್ಲ.

ಅವರ ಜೊತೆಯಲ್ಲೇ ಇದ್ದ ಪುತ್ರ ಎಸ್.ಪಿ. ಚರಣ್ ಅವರು ತಮ್ಮ ತಂದೆಯ ಆರೋಗ್ಯ ಸ್ಥಿತಿಗತಿಯ ಕುರಿತಾಗಿ ನಿಯಮಿತವಾಗಿ ಮಾಹಿತಿಯನ್ನು ನೀಡುತ್ತಲೇ ಇದ್ದರು.

ಆಗೊಮ್ಮೆ ಈಗೊಮ್ಮೆ ಎಸ್.ಪಿ.ಬಿ. ಆರೋಗ್ಯ ಸ್ಥಿತಿ ಚಿಂತಾಜನಕ ಸ್ಥಿತಿಗೆ ಜಾರುತ್ತಿದ್ದರೂ ಎಂ.ಜಿ.ಎಂ. ಆಸ್ಪತ್ರೆಯ ತಜ್ಞ ವೈದ್ಯ ತಂಡದ ಸಾಹಸದಿಂದ ಈ ಸ್ವರ ಮಾಂತ್ರಿಕ ನಿಧಾನವಾಗಿ ಚೇತರಿಸಿಕೊಳ್ಳುವ ಆಶಾವಾದವನ್ನು ಮೂಡಿಸಿದ್ದರು.
ಆಗೊಮ್ಮೆ ಈಗೊಮ್ಮೆ ಎಸ್.ಪಿ.ಬಿ. ಆರೋಗ್ಯ ಸ್ಥಿತಿ ಚಿಂತಾಜನಕ ಸ್ಥಿತಿಗೆ ಜಾರುತ್ತಿದ್ದರೂ ಎಂ.ಜಿ.ಎಂ. ಆಸ್ಪತ್ರೆಯ ತಜ್ಞ ವೈದ್ಯ ತಂಡದ ಸಾಹಸದಿಂದ ಈ ಸ್ವರ ಮಾಂತ್ರಿಕ ನಿಧಾನವಾಗಿ ಚೇತರಿಸಿಕೊಳ್ಳುವ ಆಶಾವಾದವನ್ನು ಮೂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next