ಪುಣೆ: ಮರಾಠಿ ಸಿನಿಮಾರಂಗದ ಹಿರಿಯ ನಟ-ನಿರ್ದೇಶಕ ರವೀಂದ್ರ ಮಹಾಜನಿ (77) ಶವವಾಗಿ ಪತ್ತೆಯಾಗಿರುವುದು ವರದಿಯಾಗಿದೆ.
ಶುಕ್ರವಾರ ಸಂಜೆ (ಜು.14 ರಂದು) ಪುಣೆ ನಗರದ ಸಮೀಪದ ತಾಲೆಗಾಂವ್ ದಭಾಡೆ ಪ್ರದೇಶದಲ್ಲಿರುವ ಫ್ಲ್ಯಾಟ್ ವೊಂದರಲ್ಲಿ ರವೀಂದ್ರ ಮಹಾಜನಿ ಅವರ ಮೃತದೇಹ ಪತ್ತೆಯಾಗಿದೆ. ಮೂರು ದಿನಗಳ ಹಿಂದೆಯೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ರವೀಂದ್ರ ಮಹಾಜನಿ ಅವರು ಕಳೆದ ಎಂಟು ತಿಂಗಳಿನಿಂದ ಒಂಟಿಯಾಗಿ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದರು. ನಮಗೆ ನೆರೆಹೊರೆಯವರಿಂದ ಕರೆಬಂತು. ಅವರ ನಿವಾಸದಿಂದ ದುರ್ವಾಸನೆ ಬರುತ್ತಿರುವುದರಿಂದ ಅಲ್ಲಿನ ಸ್ಥಳೀಯರು ನಮಗೆ ಮಾಹಿತಿ ನೀಡಿದ್ದಾರೆ. ನಾವು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ತಾಳೆಗಾಂವ್ ದಭಾಡೆ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮರಾಠಿ ಸಿನಿಮಾರಂಗದಲ್ಲಿ ನಟ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರವೀಂದ್ರ ಮಹಾಜನಿ ಅವರು, 1970 ರ ದಶಕದ ಅಂತ್ಯದಿಂದ 1980 ರ ದಶಕದ ಮಧ್ಯಭಾಗದವರೆಗೆ ಹಲವಾರು ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ನಟನಾಗಿ ‘ಮುಂಬೈಚಾ ಫೌಜ್ದರ್’, ‘ಜುಂಜ್’ ಮತ್ತು ‘ಕಲತ್ ನಕಲತ್’ ಸಿನಿಮಾದಲ್ಲಿ ನಟಿಸಿದ್ದರು.
ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರವೀಂದ್ರ ಮಹಾಜನಿಅವರ ಮಗ ಗಶ್ಮೀರ್ ಮಹಾಜನಿ ಅವರು ಕೂಡ ನಟನಾಗಿ ಮರಾಠಿ ಸಿನಿಮಾರಂಗದಲ್ಲಿ ಖ್ಯಾತಿಯಾಗಿದ್ದಾರೆ. ನಟನ ನಿಧನಕ್ಕೆ ಸಿಎಂ ಏಕನಾಥ್ ಶಿಂಧೆ, ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಸೇರಿದಂತೆ ಅನೇಕ ಕಲಾವಿದರು ಸಂತಾಪ ಸೂಚಿಸಿದ್ದಾರೆ.