Advertisement

Actress Leelavathi ಚಂದನವನದ ಅಪರೂಪದ ತಾರೆ ಲೀಲಾವತಿ

01:05 AM Dec 09, 2023 | Team Udayavani |

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ನಾಯಕಿಯಾಗಿ ತನ್ನದೇ ಆದ ಛಾಪು ಮೂಡಿಸಿದ್ದ ಹಿರಿಯ ನಟಿ ಲೀಲಾವತಿ ಇನ್ನು ನೆನಪು ಮಾತ್ರ. ಕನ್ನಡ ಚಿತ್ರರಂಗದ ಜತೆಗೆ ತಮಿಳು, ತೆಲುಗು, ಮಲಯಾಳ, ಹಿಂದಿ ಚಿತ್ರರಂಗಗಳಲ್ಲೂ ಗುರುತಿಸಿಕೊಂಡು ಬರೋಬ್ಬರಿ 650ಕ್ಕೂ ಅಧಿಕ ಸಿನೆಮಾಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಲೀಲಾವತಿ ಅವರದ್ದು. ಕಡು ಬಡತನದ ಬಾಲ್ಯದಲ್ಲೇ ಬಣ್ಣಲೋಕಕ್ಕೆ ಕಾಲಿಟ್ಟ ಲೀಲಾವತಿ ನಾಯಕ ನಟಿಯಿಂದ ಪೋಷಕ ನಟಿಯವರೆಗೆ ನೂರಾರು ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದ ಅಪರೂಪದ ಕಲಾವಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನ ಅಂದ ಮತ್ತು ಅಭಿನಯದ ಮೂಲಕ ಸಿನಿಪ್ರಿಯರ ಮನ ಮತ್ತು ಮಗನ ಎರಡನ್ನೂ ಚಂದನವನದ ಅಪರೂಪದ ತಾರೆಯ ಚಿತ್ರ ಬದುಕಿನ ಕಿರು “ಚಿತ್ರ’ಣ ಇಲ್ಲಿದೆ…

Advertisement

ಲೀಲಾವತಿ ಮೂಲತಃ ಕರ್ನಾಟಕದ ಕರಾವಳಿ ಪ್ರದೇಶದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂ­ಗಡಿ­­­ಯವರು. 1937ರಲ್ಲಿ ಜನಿ­ಸಿದ ಲೀಲಾವತಿ ಅವರ ಮೊದಲ ಹೆಸರು ಲೀಲಾ ಕಿರಣ್‌. ತಂದೆ-ತಾಯಿಯ ಏಕೈಕ ಪುತ್ರಿ ಲೀಲಾ ಕಿರಣ್‌, ತಮ್ಮ ಚಿಕ್ಕ ವಯಸ್ಸಿ­ನಲ್ಲೇ ಹೆತ್ತವರನ್ನು ಕಳೆದುಕೊಳ್ಳ­­­ಬೇಕಾಯಿತು. ಬಳಿಕ ಚಿಕ್ಕಮ್ಮನ ಮನೆಯಲ್ಲಿ ಬಾಲ್ಯವನ್ನು ಕಳೆದ ಲೀಲಾ ಕಿರಣ್‌, ಸೆಂಟ್‌ ಜೋಸೆಫ್ ಎಲಿ­ಮೆಂಟರಿ ಶಾಲೆಯಲ್ಲಿ ಎರಡನೇ ತರ­ಗತಿ­ಯಲ್ಲಿರು­ವಾಗಲೇ ಕಾರಣಾಂತರ­ಗಳಿಂದ ಶಾಲೆ­ಯನ್ನು ಆರಂಭದ­ಲ್ಲಿಯೇ ಮೊಟಕುಗೊಳಿಸ­­ಬೇಕಾಯಿತು.

ಇನ್ನು ಬಾಲ್ಯದಿಂದಲೂ ಲೀಲಾಗೆ ನೃತ್ಯ, ನಾಟಕ, ಸಂಗೀತದ ಕಡೆಗೆ ಎಲ್ಲಿಲ್ಲದ ಆಸಕ್ತಿ. ತನ್ನ 15ನೇ ವಯಸ್ಸಿ­ನಲ್ಲೇ ಟೆಂಟ್‌ ಸಿನೆಮಾ ಗಳಲ್ಲಿ ಆಸಕ್ತಿ ಹೊಂದಿದ್ದ ಲೀಲಾಗೆ ತಮ್ಮ ಮನೆ ಎದುರು ಇದ್ದ ಸಿನೆಮಾ ಟೆಂಟ್‌ ಆಕರ್ಷಣೆಯ ಕೇಂದ್ರವಾಗಿತ್ತು. ಟೆಂಟ್‌ ಸಿನೆಮಾದಲ್ಲಿ ಒಂದು ಪ್ರದರ್ಶನವನ್ನೂ ತಪ್ಪದೆ ನೋಡುತ್ತಿದ್ದ ಲೀಲಾ, ಪರದೆ ಹಿಂದೆ ಹೋಗಿ ಕಲಾವಿದರಿಗಾಗಿ ಹುಡು ಕಾಡುತ್ತಿದ್ದರು!

ಆನಂತರ ಲೀಲಾಗೆ ಆ ಪರದೆಯಲ್ಲಿ ಅಭಿನಯಿ­ಸುತ್ತಿರುವವರೆಲ್ಲರೂ ಪಾತ್ರಧಾರಿಗಳು. ಅವರೆಲ್ಲರೂ ಮಾಡುತ್ತಿರುವುದು ಕೇವಲ ಪಾತ್ರಗಳನ್ನು, ಅಂಥ ಪಾತ್ರವನ್ನು ಅಭಿನಯಿಸುವ ಕಲಾವಿದರಿಗೆ ಸಂಬಳ ದೊರಕುತ್ತದೆ, ಅದನ್ನು ಬೇರೆಲ್ಲೋ ಚಿತ್ರೀಕರಿಸಿ, ಕೊನೆಗೆ ತಂದು ಪ್ರೇಕ್ಷಕರ ಮುಂದೆ ಪ್ರದರ್ಶನ ಮಾಡಲಾಗುತ್ತದೆ ಎಂಬ ತೆರೆ ಹಿಂದಿನ ಸತ್ಯ ಅರಿವಾಯಿತು.

ಮೈಸೂರಿನಿಂದ ಬಣ್ಣದ ನಂಟು
ಮನೆಯಲ್ಲಿ ಕಡು ಬಡತನವಿದ್ದ ಕಾರಣ, ಲೀಲಾ ಕಿರಣ್‌ ತಮ್ಮ 16ನೇ ವಯಸ್ಸಿಗೆ ತಮ್ಮ ಕುಟುಂಬ­ದೊಂದಿಗೆ ಮೈಸೂರಿಗೆ ತೆರಳಬೇಕಾಯಿತು. ಚಿಕ್ಕ ವಯಸ್ಸಿಗೇ ಮೈಸೂರಿಗೆ ಬಂದ ಲೀಲಾ, ಆರಂಭದಲ್ಲಿ ಸಂಬಳ ಸಿಗುತ್ತದೆ ಎಂಬ ಕಾರಣಕ್ಕೆ ದುಡಿಮೆಗಾಗಿ ಚಿತ್ರರಂಗದಲ್ಲಿ ಕೆಲಸ ಮಾಡಲು ಮುಂದಾದರು. ಹೀಗೆ ದುಡಿಮೆಗಾಗಿ ಊರು ಬಿಟ್ಟು ಬೇರೊಂದು ಊರಿಗೆ ಬಂದ ಲೀಲಾವತಿಗೆ ಆರಂಭದಲ್ಲಿ ಶಂಕರ್‌ ಸಿಂಗ್‌ ಅವರ “ಚಂಚಲಾ ಕುಮಾರಿ’ ಹಾಗೂ “ನಾಗ ಕನ್ನಿಕೆ’ ಸಿನೆಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಬಿನಯಿಸುವ ಅವಕಾಶ ಕೂಡ ಸಿಕ್ಕಿತು. ಅದಾದ ಅನಂತರ 1958ರಲ್ಲಿ ಸುಬ್ಬಯ್ಯ ನಾಯ್ಡು ಅವರ “ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅವಕಾಶ ಲೀಲಾ ಅವರಿಗೆ ಸಿಕ್ಕಿತು. ಅದರ ಬೆನ್ನಲ್ಲೇ “ಮಾಂಗಲ್ಯ ಯೋಗ’ ಚಿತ್ರದ ಮೂಲಕ ಲೀಲಾ ಕಿರಣ್‌, ಲೀಲಾವತಿ ಎಂಬ ಹೆಸರಿನಲ್ಲಿ ನಾಯಕಿ ನಟಿಯಾಗಿ ಚಿತ್ರರಂಗದಲ್ಲಿ ಭಡ್ತಿ ಪಡೆದುಕೊಂಡರು. ಅದಾದ ಬಳಿಕ “ಧರ್ಮ ವಿಜಯ’, “ರಣಧೀರ ಕಂಠೀರವ’ ಹೀಗೆ ಕೆಲವು ಚಿತ್ರಗಳಲ್ಲಿ ಲೀಲಾವತಿ ಮುಖ್ಯಪಾತ್ರ­ದಲ್ಲಿ ಅಭಿನಯಿಸಿ­ದ್ದರೂ, ಲೀಲಾ­­ವತಿ ಅವರಿಗೆ ನಾಯಕಿ­­ಯಾಗಿ ಮೊಟ್ಟ ಮೊದಲ ಬಾರಿಗೆ ದೊಡ್ಡ ಹೆಸರು, ಕೀರ್ತಿ ಮತ್ತು ಜನಪ್ರಿಯತೆ­ಯನ್ನು ತಂದುಕೊಟ್ಟಿದ್ದು “ರಾಣಿ ಹೊನ್ನಮ್ಮ’ ಚಿತ್ರ.

Advertisement

ಗಾಡ್‌ ಫಾದರ್‌ಗಳಿಲ್ಲದೆ
ಸ್ಟಾರ್‌ ಆದ ನಟಿ!
ಬಡ ಕುಟುಂಬದ ಹಿನ್ನೆಲೆಯಿಂದ ಬಂದ ಲೀಲಾವತಿಯವರಿಗೆ ಚಿತ್ರರಂಗದ ಹಿನ್ನೆಲೆಯಾಗಲಿ, ಯಾವುದೇ ಗಾಡ್‌ ಫಾದರ್‌ಗಳ ಶ್ರೀರಕ್ಷೆಯಾಗಲಿ ಇರಲಿಲ್ಲ. ತಮ್ಮ ಸ್ವ ಪ್ರತಿಭೆ ಮತ್ತು ಪರಿಶ್ರಮದಿಂದ ಬಡಕುಟುಂಬದ ಹುಡುಗಿಯೊಬ್ಬಳು ದಕ್ಷಿಣ ಭಾರತದ ಜನಪ್ರಿಯ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದು, ನಿಜಕ್ಕೂ ರೋಚಕ ವಿಷಯ. ಆರಂಭದಲ್ಲಿ ಸಿನೆಮಾಗಳಲ್ಲಿ ಸಿಗುತ್ತಿದ್ದ ಚಿಕ್ಕ ಪುಟ್ಟ ಪಾತ್ರಗಳನ್ನೇ ಮನಮುಟ್ಟುವಂತೆ ಅಭಿನಯಿಸಿ, ನಿರ್ಮಾಪಕರು, ನಿರ್ದೇಶಕರು ಮತ್ತು ಪ್ರೇಕ್ಷಕರ ಗಮನ ಸೆಳೆದ ಲೀಲಾವತಿ, ಬಹುಬೇಗನೇ ನಿರ್ಮಾಪಕರು, ನಿರ್ದೇಶಕರ ಫೇವರೆಟ್‌ ಹೀರೋಯಿನ್‌ ಎನಿಸಿಕೊಂಡರು. ಬಹುಬೇಗನೆ ಎಲ್ಲವನ್ನೂ ಗ್ರಹಿಸುವ ಶಕ್ತಿ, ಪಾತ್ರಕ್ಕಾಗಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳುವುದು, ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರು ಮತ್ತು ತಂತ್ರಜ್ಞರಿಗೆ ನೀಡುತ್ತಿದ್ದ ಗೌರವ, ವಿನಯ ಮತ್ತು ವಿಧೇಯತೆ ಲೀಲಾವತಿ ಅವರ ವ್ಯಕ್ತಿತ್ವವನ್ನು ಅವರ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿತ್ತು ಎಂದರೆ ತಪ್ಪಾಗಲಾರದು.

ಸಾಮಾಜಿಕ ಕಾರ್ಯದಲ್ಲಿ ಸದಾ ಮುಂದು
ಹಿರಿಯ ನಟಿ ಲೀಲಾವತಿ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಸೇವೆಯಲ್ಲಿ ತೊಡಗಿದ್ದರು. ಕೊರೊನಾ ಸಮ ಯದಲ್ಲಿ ಕೋವಿಡ್‌ ಭಯ ತೊರೆದು ಕಷ್ಟದಲ್ಲಿರುವ ಸಿನೆಮಾ ಕಾರ್ಮಿಕರು, ಸಹ ಕಲಾವಿದರ ಕುಟುಂಬಗಳಿಗೆ ನೆರವಾಗಿದ್ದರು. ಚಿತ್ರೀಕರಣ ಇಲ್ಲದೇ ಇರುವ ಕಾರಣ ಹಲವಾರು ಮಂದಿ ಸಿನೆಮಾ ಕಾರ್ಮಿಕರು, ದಿನ ಭತ್ತೆ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅಂಥಹಾ ದಿನ ಭತ್ಯೆ ಕಲಾವಿದರಿಗೆ ದಿನಸಿ ವಿತರಣೆ ಮಾಡಿದ್ದರು ಲೀಲಾವತಿ. ತಮ್ಮ ಕೈಲಾದ ಸೇವೆಯ ಬಗ್ಗೆ ಅಂದು ಮಾತನಾಡುತ್ತಾ, “ದೇವರ ಅಪ್ಪಣೆಯಂತೆ ನಮ್ಮಿಂದ ಏನಾಗುತ್ತದೆಯೋ ಮಾಡಲು ಬಂದಿದ್ದೇವೆ. ನಾವು ಕೊಡುತ್ತಿರುವುದರಿಂದ ಯಾರಿಗೆ ಹೊಟ್ಟೆ ತುಂಬುತ್ತೂ ಗೊತ್ತಿಲ್ಲ, ಆದರೆ ಮನಸ್ಸು ತುಂಬುತ್ತೆ. ಯಾರಿಗೂ ಇನ್ನೊಬ್ಬರ ಮುಂದೆ ಕೈಚಾಚುವ ಸ್ಥಿತಿ ಬರುವುದು ಬೇಡ’ ಎಂದು ಮರುಕಪಟ್ಟಿದ್ದರು.

ಇದಲ್ಲದೇ ಸೋಲದೇವನಹಳ್ಳಿಯಲ್ಲಿ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸುಜ್ಜಿತ ಪಶು ವೈದ್ಯ ಕೀಯ ಆಸ್ಪತ್ರೆಯನ್ನು ನಿರ್ಮಿಸಿ, ಅದನ್ನು ಸರಕಾರಕ್ಕೆ ಹಸ್ತಾಂತರಿಸಿದ್ದರು. ಇದಕ್ಕೂ ತಮ್ಮ ಹಳ್ಳಿಯ ಜನರಿಗೆ ಸಹಾಯವಾಗಲೆಂದು ಸೋಲದೇವನಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದ್ದರು. ಆರಂಭದಲ್ಲಿ ಲೀಲಾವತಿಯವರು ಸಣ್ಣ ಪ್ರಮಾಣದಲ್ಲಿ ಆರಂಭಿಸಿದ್ದ ಈ ಪ್ರಾಥಮಿಕ ಕೇಂದ್ರವನ್ನು ಪುತ್ರ ವಿನೋದ್‌ ರಾಜ್‌ ಅಗತ್ಯ ಮೂಲ ಸೌಕರ್ಯಗಳೊಂದಿಗೆ ನವೀಕರಿಸಿ, ಹಳ್ಳಿಯ ಜನರಿಗೆ ಸಹಾಯವಾಗುವಂತೆ ಮಾಡಿದ್ದಾರೆ.

ನಿಮ್ಮೊಳಗೆ ನಾವಮ್ಮ
ಎಂದಿತ್ತು ಚಿತ್ರರಂಗ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಹಿರಿಯ ನಟಿ ಲೀಲಾವತಿ ಅವರನ್ನು ಸಮ್ಮಾನಿಸುವ ಕಾರ್ಯಕ್ರಮವನ್ನು ಮಾರ್ಚ್‌ 8ರ ಮಹಿಳಾ ದಿನದಂದು ಹಮ್ಮಿಕೊಳ್ಳಲಾಗಿತ್ತು. ಆದರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಲೀಲಾವತಿ ಅವರು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಹಾಗಾಗಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ಅವರ ತೋಟದ ಮನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು, ನಟರಾದ ಶ್ರೀಧರ್‌, ದೊಡ್ಡಣ್ಣ, ಸುಂದರ್‌ ರಾಜ್‌, ಜೈಜಗದೀಶ್‌, ಡಿಂಗ್ರಿ ನಾಗರಾಜ್‌, ಟೆನ್ನಿಸ್‌ ಕೃಷ್ಣ, ಹಿರಿಯ ನಟಿಯರಾದ ಗಿರಿಜಾ ಲೋಕೇಶ್‌, ಪದ್ಮಾವಸಂತಿ, ಅಂಜಲಿ, ಭವ್ಯ, ನಿರ್ದೇಶಕ ಸಾಯಿಪ್ರಕಾಶ್‌, ನಟಿ ಪೂಜಾ ಗಾಂಧಿ ಸೇರಿದಂತೆ ಅನೇಕರು ಆಗಮಿಸಿದ್ದರು. ಲೀಲಾವತಿ ಅವರಿಗೆ ಸಮ್ಮಾನ ಮಾಡಿದ್ದರು.

ಲೀಲಾವತಿ ಅವರ ಮನೆಯಲ್ಲಿ ಕಲಾವಿದರು ಸೇರಿದ್ದ ಈ ಸಮಾರಂಭಕ್ಕೆ ನಮ್ಮಮ್ಮ ಲೀಲಮ್ಮ ನಿಮ್ಮೊಳಗೆ ನಾವಮ್ಮ ಎಂದು ಹೆಸರಿಡಲಾಗಿತ್ತು. ಲೀಲಾವತಿ ಅವರ ತೋಟದ ಮನೆಯಲ್ಲಿ ಕಲಾವಿದರು ಸಾಕಷ್ಟು ಸಮಯ ಕಳೆದರು. ತಮ್ಮ ಮನೆಗೆ ಬಂದ ಕಲಾವಿದರಿಗೆ ರುಚಿ ರುಚಿಯಾದ ಊಟದ ವ್ಯವಸ್ಥೆಯನ್ನು ನಟ ವಿನೋದ್‌ ರಾಜ್‌ ಮಾಡಿಸಿದ್ದರು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. 50ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮ­ದಲ್ಲಿ ಭಾಗಿಯಾಗಿದ್ದರು. ಲೀಲಾವತಿ ಅವರ ಸಿನೆಮಾಗಳ ಹಾಡುಗಳ, ನೃತ್ಯ ಕಾರ್ಯಕ್ರಮದ ಹೈಲೆಟ್ಸ್‌ ಆಗಿತ್ತು. ಸೋಲದೇವನಹಳ್ಳಿಯ ತೋಟದ ಮನೆಗೆ ಆಗಮಿಸಿದ್ದ ಕಲಾವಿದರು ಹಿರಿಯ ನಟಿ ಲೀಲಾವತಿ ಅವರಿಂದ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಇದೇ ವೇಳೆ ನಟ- ನಟಿಯರು ಲೀಲಾವತಿ ಅವರ ಜತೆಗೆ ಒಡನಾಟವನ್ನು ಹಂಚಿಕೊಂಡಿದ್ದರು.

ನಿರ್ದೇಶಕರ ನೆಚ್ಚಿ ನ ಹೀರೋಯಿನ್‌!
1960-80ರ ದಶಕದಲ್ಲಿ ಸಿನೆಮಾಗಳಲ್ಲಿ ನಿರ್ದೇಶಕರಿಗೆ ವಿಶೇಷ ಗೌರವ, ಸ್ಥಾನ-ಮಾನಗಳಿರು­ತ್ತಿತ್ತು. ಅದರಲ್ಲೂ ಎಷ್ಟೋ ಜನ ಅಂದಿನ ಸ್ಟಾರ್‌ ಹೀರೋಗಳೇ ನಿರ್ದೇಶಕರ ಎದುರು ನಿಂತು ಮಾತನಾಡಲು ಹಿಂದೇಟು ಹಾಕುತ್ತಿದ್ದರು. ಇಂಥ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ನಿರ್ದೇಶಕರು, ಇತರ ಕಲಾವಿದರು, ತಂತ್ರಜ್ಞರು ಬರುವ ಮೊದಲೇ ಲೀಲಾವತಿ ಹಾಜರಾಗಿರುತ್ತಿದ್ದರು! ತಮ್ಮ ಪಾತ್ರದ ಎಲ್ಲ ಡೈಲಾಗ್‌ ಗಳನ್ನು ಮೊದಲೇ ಚೆನ್ನಾಗಿ ಓದಿ ಮನನ ಮಾಡಿಕೊಳ್ಳುತ್ತಿದ್ದ ಲೀಲಾವತಿ, ತಮ್ಮ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಸಿಂಗಲ್‌ ಟೇಕ್‌ನಲ್ಲಿ ನಿರ್ದೇಶಕರಿಗೆ ಒಪ್ಪಿಸಿಬಿಡುತ್ತಿದ್ದರು. ಹೀಗಾಗಿಯೇ ಅಂದಿನ ಅದೆಷ್ಟೋ ನಿರ್ದೇಶಕರು ಲೀಲಾವತಿ ಅವರನ್ನು ಸಿಂಗಲ್‌ ಟೇಕ್‌ ಆರ್ಟಿಸ್ಟ್‌ ಎಂದು ಮುಕ್ತವಾಗಿ ಶಹಬ್ಟಾಸ್‌ ಗಿರಿ ನೀಡುತ್ತಿದ್ದರು. ಈ ಕಾರಣದಿಂದಾಗಿಯೇ ಅಂದಿನ ಬಹುತೇಕ ನಿರ್ಮಾಪಕರು, ನಿರ್ದೇಶಕರಿಗೆ ತಮ್ಮ ಸಿನೆಮಾಕ್ಕೆ ಲೀಲಾವತಿ ಅವರೇ ಮೊದಲ ಆದ್ಯತೆಯಾಗಿರುತ್ತಿದ್ದರು.

ಸೌತ್‌ ಇಂಡಿಯಾದಲ್ಲೂ ಲೀಲಾ ಪ್ರಭಾವಳಿ
ಕನ್ನಡ ಚಿತ್ರರಂಗದಲ್ಲಿ ಲೀಲಾವತಿ ಅವರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ತಮಿಳು, ತೆಲುಗು, ಮಲೆಯಾಳ, ಹಿಂದಿ ಬೇರೆ ಬೇರೆ ಭಾಷೆಗಳಿಂದಲೂ ಲೀಲಾವತಿ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದವು. ಅದಾಗಲೇ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್‌ ಅವರಂಥ ಸ್ಟಾರ್‌ ಜತೆ ಅಭಿನಯಿಸಿ ಸೈ ಎನಿಸಿಕೊಂಡು, ಬೇಡಿಕೆಯ ಹೀರೋ ಯಿನ್‌ ಆಗಿದ್ದ, ಲೀಲಾವತಿ ಆನಂತರ ತಮಿಳಿನಲ್ಲಿ ಎಂ. ಜಿ. ರಾಮಚಂದ್ರರಾವ್‌ (ಎಂಜಿಆರ್‌), ತೆಲುಗಿನಲ್ಲಿ ಎನ್‌. ಟಿ. ರಾಮರಾವ್‌ (ಎನ್‌ಟಿಆರ್‌), ತಮಿಳಿನಲ್ಲಿ ಶಿವಾಜಿ ಗಣೇಶನ್‌, ಜೆಮಿನಿ ಗಣೇಶನ್‌ ಹೀಗೆ 1970-80 ದಶಕದಲ್ಲಿ ದಕ್ಷಿಣ ಭಾರತದ ಬಹುತೇಕ ಸ್ವಾರ್ ನಾಯಕ ನಟರಿಗೆ ನಾಯಕಿಯಾಗಿ ಅಭಿನಯಿಸಿ ಇತರ ಭಾಷೆಗಳಲ್ಲೂ ತಮ್ಮ ಛಾಪು ಮೂಡಿಸಲು ಯಶಸ್ವಿಯಾದರು.

ಪೋಷಕ ನಟಿಯಾಗಿಯೂ ಸೈ!
1970-80 ದಶಕದಲ್ಲಿ ದಕ್ಷಿಣ ಭಾರತದ ಬಹುತೇಕ ಸ್ವಾರ್ ನಾಯಕ ನಟರಿಗೆ ನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಲೀಲಾವತಿ, ಅನಂತರ ಬಂದ ಅದೆಷ್ಟೋ ಸ್ಟಾರ್ ನಾಯಕರಿಗೆ ಪೋಷಕ ನಟಿಯಾಗಿಯೂ ತೆರೆ ಮೇಲೆ ಕಾಣಿಸಿ­ಕೊಂಡಿದ್ದರು. ಕನ್ನಡದಲ್ಲಿ ಸಾಹಸಸಿಂಹ ವಿಷ್ಣು ವರ್ಧನ್‌, ಶಂಕರ್‌ ನಾಗ್‌, ರವಿಚಂದ್ರನ್‌, ತಮಿಳಿನಲ್ಲಿ ಕಮಲ್‌ ಹಾಸನ್‌, ರಜನಿಕಾಂತ್‌, ತೆಲುಗಿನಲ್ಲಿ ಚಿರಂಜೀವಿ ಹೀಗೆ 1980ರ ದಶಕದ ಅನಂತರ ಸ್ಟಾರ್‌ ಪಟ್ಟಕ್ಕೇರಿದ ನಾಯಕರೊಂದಿಗೂ ಲೀಲಾವತಿ ಹತ್ತಾರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ತೋಟದ ಮನೆಯಲ್ಲಿನ
ಕೊನೇ ದಿನಗಳು
2000ನೇ ಇಸವಿಯ ಅನಂತರ ಚಿತ್ರರಂಗದಿಂದ ನಿಧಾನವಾಗಿ ದೂರ ಸರಿದ ಲೀಲಾವತಿ, ಬಳಿಕ ಕೃಷಿ ಮತ್ತು ಸಾಮಾಜಿಕ ಕಾರ್ಯಗಳ ಕಡೆಗೆ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡರು. ಬೆಂಗಳೂರಿನ ಹೊರವಲಯದ ನೆಲಮಂಗಲ ತಾಲೂಕಿನ, ಸೋಲದೇವನಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿದ್ದ ಲೀಲಾವತಿ, ಅಲ್ಲಿ ಕೃಷಿ, ಹೈನುಗಾರಿಕೆ, ಪ್ರಾಣಿ ಸಾಕಣೆ ಮಾಡಿಕೊಂಡು ತಮ್ಮ ತೋಟದ ಮನೆಯಲ್ಲಿ ಮಗ ವಿನೋದ್‌ ರಾಜ್‌ ಅವರೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು.

ಲೀಲಾವತಿ ಬೆಸ್ಟ್‌
ಮದುವೆ ಮಾಡಿನೋಡು (ಸರಸ್ವತಿ ಪಾತ್ರ)
ಸಂತ ತುಕಾರಾಮ… (ಜೀಜಾ)
ತುಂಬಿದ ಕೊಡ (ರಾಧಾ)
ಭಕ್ತ ಕುಂಬಾರ (ಗೋರ ಪತ್ನಿ)
ಸಿಪಾಯಿ ರಾಮು (ಯುಮುನಾ)
ಗೆಜ್ಜೆ ಪೂಜೆ (ಅಪರ್ಣಾ)
ರಾಣಿ ಹೊನ್ನಮ್ಮ (ಹೊನ್ನಮ್ಮ)
ಹೊಂಬಿಸಿಲು (ಡಾ| ಕಮಲಮ್ಮ)
ಗಾಳಿ ಗೋಪುರ (ಲಕ್ಷ್ಮೀ)
ವೀರ ಕೇಸರಿ (ಮಂದರಾ ಮಾಲಾ)
ಮನ ಮೆಚ್ಚಿದ ಮಡದಿ (ಸುಮನಾ)
ರಣಧೀರ ಕಂಠೀರವ (ದೊಡ್ಡಿ)
ಕಿತ್ತೂರು ಚೆನ್ನಮ್ಮ (ವೀರವ್ವ)
ಒಲವಿನ ಉಡುಗೊರೆ (ರತ್ನಮ್ಮ)
ನಾಗರ ಹಾವು (ತುಂಗಾ)

ಕಷ್ಟಕ್ಕೆ ಮರುಗುವ ಹೃದಯ
ನಮ್ಮ ಅಮ್ಮನದ್ದು ಯಾರಿಗೂ ಕೇಡು ಬಯ ಸದ ವ್ಯಕ್ತಿತ್ವ. ಆಕೆ ಇನ್ನೊಂದಷ್ಟು ವರ್ಷ ಬದುಕಿರ ಬೇಕಿತ್ತು. ಅಮ್ಮನಿಗೆ ಊರಿನ ಜನರು ಆರೋಗ್ಯವಾಗಿರಬೇಕು, ದನ ಕರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗಬೇಕು ಎಂಬ ಆಸೆ. ಅದೇ ಕಾರಣದಿಂದ ಆಕೆ ನಮ್ಮ ಊರಿ ನಲ್ಲಿ ಆಸ್ಪತ್ರೆ ನಿರ್ಮಿಸಿದ್ದು. ಅಮ್ಮನ ಒಳ್ಳೆಯ ಗುಣ ವೆಂದರೆ ಆಕೆ ಯಾವತ್ತಿಗೂ ಯಾವು ದನ್ನೂ ತಡ ಮಾಡುತ್ತಿರಲಿಲ್ಲ. ಊರ ಲ್ಲೊಂದು ಆಸ್ಪತ್ರೆ ನಿರ್ಮಿಸಬೇಕೆಂಬ ಯೋಚನೆ ಬಂದ ಕೂಡಲೇ ಅದನ್ನು ಕಾರ್ಯರೂ ಪಕ್ಕೆ ತಂದರು. ಹಳ್ಳಿ ಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆಲ್ಲ ಸಿಟಿಗೆ ಹೋಗ ಬೇಕು. ಅದು ಕಷ್ಟದ ಕೆಲಸ. ಅದರ ಬದಲಿಗೆ ನಮ್ಮ ಊರಲ್ಲೇ ಒಂದು ಆಸ್ಪತ್ರೆ ಇದ್ದರೆ ಅದರಿಂದ ಇಡೀ ಊರಿಗೆ ಸಹಾಯವಾಗುತ್ತದೆ ಎಂದುಕೊಂಡ ಅಮ್ಮ ಚೆನ್ನೈ ಯಲ್ಲಿದ್ದ ಜಾಗ ಮಾರಾಟ ಮಾಡಿ, ಆಸ್ಪತ್ರೆ ನಿರ್ಮಿಸಿದರು.

ಅಮ್ಮನ ಒಂದು ಆಸೆ ಹಾಗೇ ಉಳಿದಿದೆ. ಅದು ಸೋಲಾರ್‌ ಪಾರ್ಕ್‌ ನಿರ್ಮಿಸುವುದು. ನಮ್ಮ ಊರಿನಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಿಸುವು ದರಿಂದ ಹಳ್ಳಿಯ ಜನರಿಗೆ ಒಂದಷ್ಟು ಕೆಲಸ ಸಿಗುತ್ತದೆ ಎಂಬುದು ಅವರ ಆಸೆಯಾಗಿತ್ತು.
ವಿನೋದ್‌ ರಾಜ್‌, ಲೀಲಾವತಿ ಪುತ್ರ

ಸಂದ ಪ್ರಶಸ್ತಿ ಪುರಸ್ಕಾರಗಳು
1960 –70
ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿ (ಗೆಜ್ಜೆಪೂಜೆ)
1971 –72
ರಾಜ್ಯ ಚಲನಚಿತ್ರ ಪ್ರಶಸ್ತಿ (ಸಿಪಾಯಿ ರಾಮು)
1989 –90
ರಾಜ್ಯ ಚಲನಚಿತ್ರ ಪ್ರಶಸ್ತಿ (ಡಾಕ್ಟರ್‌ ಕೃಷ್ಣ)
2008 ತುಮಕೂರು ವಿಶ್ವವಿದ್ಯಾಲನಿಲಯದಿಂದ ಗೌರವ ಡಾಕ್ಟರೇಟ್‌
2006 “ಫಿಲಂ ಫೇರ್‌ ಕನ್ನಡ’ – ಅತ್ಯುತ್ತಮ ಪೋಷಕ ನಟಿ
(ಕನ್ನಡದ ಕಂದ)
1999–2000
ಡಾ| ರಾಜಕುಮಾರ್‌ ಜೀವಮಾನ
ಸಾಧನೆ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next