ಹೊಸದಿಲ್ಲಿ: ಪತ್ರಿಕಾ ಸ್ವಾತಂತ್ರ್ಯ, ನಾಗರಿಕ ಸ್ವಾತಂತ್ರ್ಯಗಳಿಗಾಗಿ ಹೋರಾಡಿದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಗುರುವಾರ ನಿಧನ ಹೊಂದಿದ್ದಾರೆ. 95 ವರ್ಷ ವಯಸ್ಸಿನ ಕುಲದೀಪ್ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದ ಕಾರಣ ಐದು ದಿನಗಳ ಹಿಂದೆ ದಿಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕುಲದೀಪ್ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಹಾಗೂ ಅಣ್ಣನನ್ನು ಅಗಲಿದ್ದಾರೆ. ಗುರುವಾರವೇ ಅವರ ಅಂತ್ಯಕ್ರಿಯೆ ನಡೆಯಿತು. 1923ರಂದು ಈಗಿನ ಪಾಕಿಸ್ಥಾನದ ಸಿಯಲ್‌ಕೋಟ್‌ನಲ್ಲಿ ಜನಿಸಿದ ನಯ್ಯರ್, ಉರ್ದು ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶಿಸಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ದಿ ಸ್ಟೇಟ್ಸ್‌ಮನ್ ಸಹಿತ ಅನೇಕ ಪತ್ರಿಕೆಗಳಲ್ಲಿ ಇವರು ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ತುರ್ತುಪರಿಸ್ಥಿತಿಯ ವೇಳೆ ಸೆರೆವಾಸವನ್ನೂ ಅನುಭವಿಸಿದ್ದರು. 50ಕ್ಕೂ ಹೆಚ್ಚು ಪತ್ರಿಕೆಗಳಿಗೆ ಅವರು ಅಂಕಣ ಹಾಗೂ ಲೇಖನಗಳನ್ನು ಬರೆದಿದ್ದರು.
ಕುಲದೀಪ್ ಪತ್ರಕರ್ತರಾಗಷ್ಟೇ ಗುರುತಿಸಿ ಕೊಂಡಿರಲಿಲ್ಲ, ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದರು.1990ರಲ್ಲಿ ಬ್ರಿಟನ್‌ನಲ್ಲಿ ಭಾರತದ ಹೈ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿದ್ದರು. 1997ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶಿತಗೊಂಡಿದ್ದರು. ಭಾರತ ಮತ್ತು ಪಾಕಿಸ್ಥಾನದ ಮಧ್ಯೆ ಶಾಂತಿ ಸ್ಥಾಪನೆಯಾಗಬೇಕೆಂಬ ಉತ್ಕಟ ಬಯಕೆಯನ್ನು ಕುಲದೀಪ್ ಹೊಂದಿದ್ದರು.
ತುರ್ತುಪರಿಸ್ಥಿತಿಯ ವೇಳೆ ಪ್ರಜಾತಂತ್ರಕ್ಕಾಗಿ ಗಟ್ಟಿಧ್ವನಿಯಲ್ಲಿ ಹೋರಾಡಿದ ವ್ಯಕ್ತಿ. ನೇರ ಮತ್ತು ನಿರ್ಭೀತಿಯಿಂದ ನಿಲುವು ಪ್ರಕಟಿಸುತ್ತಿದ್ದರು ಎಂದು ಕುಲದೀಪ್ ಅವರನ್ನು ಗುಣಗಾನ ಮಾಡಿರುವ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನಿ ಮೋದಿ, ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಪಾದಕರ ಗಿಲ್ಡ್ ಕೂಡಾ ಕುಲದೀಪ್ ನಿಧನಕ್ಕೆ ಸಂತಾಪ ಸೂಚಿಸಿದೆ.